Kannada NewsKarnataka NewsLatest

*ಗೇ ಡೇಟಿಂಗ್ ಆ್ಯಪ್ ಬಳಸೋರೆ ಇರಲಿ ಎಚ್ಚರ!*

ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಡೇಟಿಂಗ್​ ಆ್ಯಪ್ ಗಳ ಮೂಲಕ ಮೋಸ ಹೋಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದೀಗ ಇಂತದ್ದೇ ಘಟನೆಯೊಂದು ಬೆಳಕಿಗೆ ಬಂದಿದೆ.

ಗೇ ಡೇಟಿಂಗ್ ಆಪ್ ಮೂಲಕ ಪರಿಚಿತನಾದ ವ್ಯಕ್ತಿಯಿಂದ ವಂಚನೆಗೊಳಗಾದ ಪ್ರಕರಣ ಕೆಲ ದಿನಗಳ ಹಿಂದೆ ವರದಿಯಾಗಿತ್ತು. ಇದೀಗ ಅದೇ ರೀತಿಯ ಮತ್ತೊಂದು ಪ್ರಕರಣ ನಡೆದಿದೆ. ‘ಗ್ರೈಂಡರ್-ಗೇ’ ಆ್ಯಪ್ ಮೂಲಕ ಪರಿಚಯ ಮಾಡಿಕೊಳ್ಳುತ್ತಿದ್ದ ಆರೋಪಿಗಳು, ಅಮಾಯಕರನ್ನು ನಿರ್ಜನ ಪ್ರದೇಶಗಳಿಗೆ ಕರೆಸಿಕೊಂಡು ಚಿತ್ರಹಿಂಸೆ ನೀಡಿ ಹಣ ವಸೂಲಿ ಮಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.

ಗೇ ಡೇಟಿಂಗ್ ಆ್ಯಪ್‌ಗಳನ್ನು ಬಳಸುವವರನ್ನೇ ಗುರಿಯಾಗಿಸಿಕೊಂಡು ಹಲ್ಲೆ, ದರೋಡೆ ಹಾಗೂ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಜಾಲವನ್ನು ಚಿಕ್ಕಬಳ್ಳಾಪುರ ಪೊಲೀಸರು ಭೇದಿಸಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಗೇ ಆ್ಯಪ್ ಮೂಲಕ ಪರಿಚಯವಾದವರನ್ನು ಚಿಕ್ಕಬಳ್ಳಾಪುರ ತಾಲೂಕಿನ ದಿಬ್ಬೂರು, ಜಾತವಾರ ಹಾಗೂ ಕೊಂಡೇನಹಳ್ಳಿಯ ನಿರ್ಜನ ಪ್ರದೇಶಗಳಿಗೆ ಕರೆದೊಯ್ಯಲಾಗುತ್ತಿತ್ತು. ಅಲ್ಲಿ ಅವರನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿ, ಫೋಟೋ ಮತ್ತು ವಿಡಿಯೋಗಳನ್ನು ಸೆರೆಹಿಡಿದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು.

ಫೋನ್‌ಪೇ ಮೂಲಕ ಹಣ ವರ್ಗಾಯಿಸಿಕೊಂಡು, ಅವರ ಕುಟುಂಬದವರಿಗೂ ಬೆದರಿಕೆ ಹಾಕುತ್ತಿದ್ದರು. ಬಳಿಕ ಮೊಬೈಲ್ ಕಸಿದುಕೊಂಡು ನಿರ್ಜನ ಪ್ರದೇಶದಲ್ಲೇ ಬಿಟ್ಟು ಪರಾರಿಯಾಗುತ್ತಿದ್ದರು. ಒಂದೇ ವಾರದಲ್ಲಿ ಚಿಕ್ಕಬಳ್ಳಾಪುರದ ತರಕಾರಿ ವ್ಯಾಪಾರಿ ಹಾಗೂ ಶಿಡ್ಲಘಟ್ಟದ ಶಿಕ್ಷಕರೊಬ್ಬರ ಮೇಲೆ ಇದೇ ರೀತಿ ಹಲ್ಲೆ ನಡೆಸಿ ದರೋಡೆ ಮಾಡಲಾಗಿದೆ.

ಪ್ರಕರಣದ ತನಿಖೆ ನಡೆಸಿದ ಚಿಕ್ಕಬಳ್ಳಾಪುರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಚಿಕ್ಕಬಳ್ಳಾಪುರ ತಾಲೂಕಿನ ಜಾತವಾರ ಗ್ರಾಮದ ಮಹೇಶ್, ನಾಯನಹಳ್ಳಿಯ ಚೇತನ್ ಹಾಗೂ ಹೊಸಕೋಟೆ ಮೂಲದ ಅರುಣ್ ಎಂದು ಗುರುತಿಸಲಾಗಿದೆ.

ಇನ್ನು ಬಂಧಿತ ಆರೋಪಿಗಳು ಇದುವರೆಗೆ ಒಟ್ಟು 8 ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಚಿಕ್ಕಬಳ್ಳಾಪುರ, ಗೌರಿಬಿದನೂರು, ಚಿಂತಾಮಣಿ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲೂ ಈ ಜಾಲ ವ್ಯಾಪಿಸಿದೆ ಎಂಬುವುದು ತನಿಖೆಯಲ್ಲಿ ಬಯಲಾಗಿದೆ. ಬಂಧಿತ ಮೂವರ ಹಿಂದೆ ಇನ್ನಷ್ಟು ಜನರು ಅಡಗಿರುವ ಸಾಧ್ಯತೆ ಇದ್ದು, ಆ ನಿಟ್ಟಿನಲ್ಲಿಯೂ ತನಿಖೆ ನಡೆಸಲಾಗುತ್ತಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button