Kannada NewsLatestNational

*‘ಒಳ್ಳೆಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ’*: *ನಾನಾ ಪಾಟೇಕರ್ ನಿಧನಕ್ಕೆ ಗೋವಾ ಸಿಎಂ ಸಂತಾಪ*

ಪ್ರಗತಿವಾಹಿನಿ ಸುದ್ದಿ: ಹಿರಿಯ ನಟ ನಾನಾ ಪಾಟೇಕರ್ ನಿಧನಕ್ಕೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತೀವ್ರ ಸಂತಾಪ ಸೂಚಿಸಿದ್ದಾರೆ. ನಾನಾ ಪಾಟೇಕರ್ ಅಗಲಿಕೆಯಿಂದ ಒಳ್ಳೆಯ ಸ್ನೇಹಿತನನ್ನು ಕಳೆದುಕೊಂಡಂತಾಗಿದೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಮೋದ್ ಸಾವಂತ್, ನಾನಾ ಪಾಟೇಕರ್ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡರು. ನಾನಾ ಪಾಟೇಕರ್ ಗೋವಾಗೆ ಬಂದಾಗಲೆಲ್ಲ ತಪ್ಪದೇ ಕರೆ ಮಾಡುತ್ತಿದ್ದರು ಎಂದು ತಿಳಿಸಿದರು.

ಭಾರತೀಯ ಚಿತ್ರರಂಗದ ಶ್ರೇಷ್ಠ ನಟರಲ್ಲಿ ನಾನಾ ಪಾಟೇಕರ್ ಒಬ್ಬರಾಗಿದ್ದರು. ನಟನೆಯ ಜೊತೆಗೆ ಸಮಾಜ ಸೇವೆಯಲ್ಲೂ ಸಕ್ರಿಯರಾಗಿದ್ದು, ಗೋವಾದೊಂದಿಗೆ ಆಳವಾದ ನಂಟು ಹೊಂದಿದ್ದರು ಎಂದು ಸಾವಂತ್ ಹೇಳಿದರು.

ನಾನಾ ಪಾಟೇಕರ್ ಫೌಂಡೇಶನ್ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ನಟ, ಗೋವಾದಲ್ಲೂ ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸಿದ್ದರು. ರಾಜ್ಯದಲ್ಲಿ ಸಮಾಜ ಸೇವೆಯನ್ನು ಮತ್ತಷ್ಟು ವಿಸ್ತರಿಸುವ ಯೋಜನೆ ಹೊಂದಿದ್ದರು ಎಂದು ಮುಖ್ಯಮಂತ್ರಿ ತಿಳಿಸಿದರು.

ಕೇವಲ ಎರಡು ದಿನಗಳ ಹಿಂದಷ್ಟೇ ಯುವ ಕೊಂಕಣಿ ಕಲಾವಿದರೊಂದಿಗೆ ನಾನಾ ಪಾಟೇಕರ್ ನೃತ್ಯ ಮಾಡುತ್ತಿದ್ದ ವಿಡಿಯೋವನ್ನು ನೋಡಿದ್ದಾಗಿ ನೆನಪಿಸಿಕೊಂಡ ಸಾವಂತ್ ಇಷ್ಟು ಬೇಗ ಅಗಲಿರುವುದು ದುಃಖದ ಸಂಗತಿ ಎಂದು ಹೇಳಿದರು.

ನಾನಾ ಪಾಟೇಕರ್ ಕುಟುಂಬದೊಂದಿಗೆ ಈ ದುಃಖದ ಸಂದರ್ಭದಲ್ಲಿ ತಾನು ನಿಲ್ಲುವುದಾಗಿ ತಿಳಿಸಿದ ಪ್ರಮೋದ್ ಸಾವಂತ್, ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button