*‘ರಾಮಾಯಣ’ ನಿರ್ಮಾಪಕರಿಗೆ ಬಿಗ್ ಶಾಕ್*: *ಪ್ರೈಮ್ ಫೋಕಸ್ ಕಚೇರಿ ಮೇಲೆ ಐಟಿ ದಾಳಿ*

ಪ್ರಗತಿವಾಹಿನಿ ಸುದ್ದಿ: ಭಾರೀ ನಿರೀಕ್ಷೆ ಮೂಡಿಸಿರುವ ‘ರಾಮಾಯಣ’ ಸಿನಿಮಾದ ನಿರ್ಮಾಣ ಸಂಸ್ಥೆ ಪ್ರೈಮ್ ಫೋಕಸ್‌ಗೆ ಹೊಸ ಸಂಕಷ್ಟ ಎದುರಾಗಿದೆ. ಸಂಸ್ಥೆಯ ಮುಂಬೈ ಕಚೇರಿಗಳು ಹಾಗೂ ಮುಖ್ಯಸ್ಥ ನಮಿತ್ ಮಲ್ಹೋತ್ರಾ ಅವರ ಕಚೇರಿ ಮತ್ತು ನಿವಾಸದಲ್ಲಿ ಆದಾಯ ತೆರಿಗೆ ಇಲಾಖೆ ಶೋಧ ನಡೆಸಿದೆ.
ಶೋಧ ಕಾರ್ಯದಲ್ಲಿ ಅಧಿಕಾರಿಗಳು ವಿವಿಧ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಸಂಸ್ಥೆಯ ಹಣಕಾಸು ವ್ಯವಹಾರಗಳ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ ಎನ್ನಲಾಗಿದೆ. ವಿದೇಶಿ ಹಣಕಾಸು ವಹಿವಾಟುಗಳಿಗೆ ಸಂಬಂಧಿಸಿದ ಅಂಶಗಳ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ.
ವಿದೇಶಿ ಹೂಡಿಕೆ ಹಾಗೂ ಹಣದ ವಹಿವಾಟಿನಲ್ಲಿ ನಿಯಮ ಉಲ್ಲಂಘನೆಯಾಗಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಆದರೆ ದಾಳಿಯ ಉದ್ದೇಶ ಅಥವಾ ತನಿಖೆಯ ನಿಖರ ಸ್ವರೂಪದ ಬಗ್ಗೆ ಆದಾಯ ತೆರಿಗೆ ಇಲಾಖೆ ಈವರೆಗೆ ಅಧಿಕೃತ ಮಾಹಿತಿ ನೀಡಿಲ್ಲ.
ಐಟಿ ದಾಳಿ ನಡೆದಿರುವ ಸುದ್ದಿ ಹೊರಬಿದ್ದ ಬೆನ್ನಲ್ಲೇ ಪ್ರೈಮ್ ಫೋಕಸ್ ಸಂಸ್ಥೆಯ ಷೇರು ಮೌಲ್ಯದಲ್ಲೂ ಏರಿಳಿತ ಕಂಡುಬಂದಿದೆ. ವರದಿಗಳ ಪ್ರಕಾರ, ಸಂಸ್ಥೆಯ ಷೇರು ದರದಲ್ಲಿ ಸುಮಾರು ಶೇ.8ರಷ್ಟು ಕುಸಿತ ದಾಖಲಾಗಿದ್ದು, ಹೂಡಿಕೆದಾರರ ಗಮನ ಸೆಳೆದಿದೆ.
‘ರಾಮಾಯಣ’ ಸಿನಿಮಾದ ನಿರ್ಮಾಣಕ್ಕಾಗಿ ವಿವಿಧ ವಿದೇಶಿ ಕಂಪನಿಗಳ ಮೂಲಕ ದೊಡ್ಡ ಮೊತ್ತದ ಹಣ ಹರಿದುಬಂದಿದೆ ಎಂಬ ಚರ್ಚೆಯೂ ನಡೆಯುತ್ತಿದೆ. ನೂರಾರು ಕೋಟಿ ರೂಪಾಯಿ ಹೂಡಿಕೆ ಹಾಗೂ ಅಂತರರಾಷ್ಟ್ರೀಯ ಮಟ್ಟದ ಹಣಕಾಸು ವ್ಯವಹಾರಗಳ ಕುರಿತು ತನಿಖೆ ನಡೆಯುತ್ತಿದೆ.
ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಸಿನಿಮಾಗಳಲ್ಲಿ ಒಂದಾಗಿ ‘ರಾಮಾಯಣ’ ರೂಪುಗೊಳ್ಳುತ್ತಿದೆ. ನಿತೇಶ್ ತಿವಾರಿ ನಿರ್ದೇಶನದ ಚಿತ್ರದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಹಾಗೂ ಸನ್ನಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.
ಚಿತ್ರದ ನಿರ್ಮಾಣ ಹಾಗೂ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ಇದೀಗ ಆದಾಯ ತೆರಿಗೆ ಇಲಾಖೆಯ ಶೋಧದ ಬೆಳವಣಿಗೆ ಕುತೂಹಲ ಮೂಡಿಸಿದೆ. ಆದರೆ ಈವರೆಗೆ ಯಾವುದೇ ಅಕ್ರಮ ನಡೆದಿದೆ ಎಂಬುದು ಅಧಿಕೃತವಾಗಿ ದೃಢಪಟ್ಟಿಲ್ಲ.
ದಾಳಿ ಮತ್ತು ತನಿಖೆಯ ಕುರಿತು ಆದಾಯ ತೆರಿಗೆ ಇಲಾಖೆ ಅಥವಾ ಪ್ರೈಮ್ ಫೋಕಸ್ ಸಂಸ್ಥೆಯಿಂದ ಅಧಿಕೃತ ಹೇಳಿಕೆ ಹೊರಬಂದಿಲ್ಲ. ಶೋಧ ಕಾರ್ಯ ಪೂರ್ಣಗೊಂಡ ಬಳಿಕವೇ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಸ್ಪಷ್ಟವಾಗುವ ಸಾಧ್ಯತೆಯಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




