*ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ₹11.80 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ*

ಮೂರು ಕಾಮಗಾರಿಗಳಿಗೆ ಭೂಮಿಪೂಜೆ, ಚಿಕ್ಕುಬಾಗ್ನಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿರುವ ಮಾಜಿ ಸಚಿವೆ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಗುರುವಾರ ಒಟ್ಟು ₹11.80 ಕೋಟಿ ವೆಚ್ಚದ ನಾಲ್ಕು ಅಭಿವೃದ್ಧಿ ಕಾಮಗಾರಿಗಳ ಪೈಕಿ ಮೂರು ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ಮತ್ತೊಂದು ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿ, ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಅಗತ್ಯ ಸಲಹೆ, ಸೂಚನೆಗಳನ್ನು ನೀಡಿದರು.
ಕ್ಷೇತ್ರದ ವಿವಿಧ ಬಡಾವಣೆಗಳಲ್ಲಿ ಸುಸಜ್ಜಿತ ರಸ್ತೆ, ಚರಂಡಿ ಹಾಗೂ ಯುಟಿಲಿಟಿ ಪೈಪ್ ಅಳವಡಿಕೆ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದ್ದು, ಸಾರ್ವಜನಿಕರ ದೈನಂದಿನ ಸಂಚಾರವನ್ನು ಸುಗಮಗೊಳಿಸುವುದು, ನೈರ್ಮಲ್ಯ ಕಾಪಾಡುವುದು ಹಾಗೂ ಬಡಾವಣೆಗಳಲ್ಲಿ ಮೂಲಸೌಕರ್ಯದ ಕೊರತೆ ನೀಗಿಸುವ ನಿಟ್ಟಿನಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಸಹ್ಯಾದ್ರಿ ನಗರದಲ್ಲಿ ₹5 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಹ್ಯಾದ್ರಿ ನಗರದಲ್ಲಿ ಸುಮಾರು ₹5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ರಸ್ತೆ, ಚರಂಡಿ ಹಾಗೂ ಯುಟಿಲಿಟಿ ಪೈಪ್ ಅಳವಡಿಕೆ ಕಾಮಗಾರಿಗೆ ಲಕ್ಷ್ಮೀ ಹೆಬ್ಬಾಳಕರ್ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ಸುಸಜ್ಜಿತ ರಸ್ತೆ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಸಾರ್ವಜನಿಕರ ದೈನಂದಿನ ಪ್ರಯಾಣವನ್ನು ಸುಗಮಗೊಳಿಸುವುದು ಮತ್ತು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ವೇಗ ನೀಡುವುದು ತಮ್ಮ ಮುಖ್ಯ ಗುರಿಯಾಗಿದೆ ಎಂದು ಅವರು ತಿಳಿಸಿದರು.

ಐದು ಬಡಾವಣೆಗಳಲ್ಲಿ ₹3.50 ಕೋಟಿ ಅಭಿವೃದ್ಧಿ ಕಾಮಗಾರಿ
ಜಯನಗರ, ವಿನಾಯಕ ನಗರ, ಸಂಕಲ್ಪ ಲೇಔಟ್, ಶಿವನಗರ ಹಾಗೂ ಕೆ.ಎಚ್.ಬಿ. ಕಾಲೋನಿಗಳಲ್ಲಿ ಸುಮಾರು ₹3.50 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಿರುವ ರಸ್ತೆ, ಚರಂಡಿ ಹಾಗೂ ಯುಟಿಲಿಟಿ ಪೈಪ್ ಅಳವಡಿಕೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.
ಈ ಬಡಾವಣೆಗಳ ನಿವಾಸಿಗಳಿಗೆ ದೈನಂದಿನ ಸಂಚಾರದಲ್ಲಿ ತೊಂದರೆಯಾಗದಂತೆ ಹಾಗೂ ಅಗತ್ಯ ಮೂಲಸೌಕರ್ಯಗಳ ಕೊರತೆ ಎದುರಾಗದಂತೆ ಹಂತ ಹಂತವಾಗಿ ವಿವಿಧ ಪ್ರದೇಶಗಳನ್ನು ತಲುಪಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.
ಕಾಮಗಾರಿಗಳನ್ನು ಗುಣಮಟ್ಟದಿಂದ ಹಾಗೂ ನಿಗದಿತ ಕಾಲಮಿತಿಯೊಳಗೆ ಶೀಘ್ರವಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ.
ಮೂರು ಬಡಾವಣೆಗಳಿಗೆ ₹1.60 ಕೋಟಿ ಅನುದಾನದ ಕಾಮಗಾರಿ
ಮುಸ್ತಫಾ ಕಾಲೋನಿ, ಸಿದ್ಧೇಶ್ವರ ಕಾಲೋನಿ ಹಾಗೂ ಜ್ಯೋತಿ ನಗರದಲ್ಲಿ ಸುಮಾರು ₹1.60 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ರಸ್ತೆ, ಚರಂಡಿ ಹಾಗೂ ಯುಟಿಲಿಟಿ ಪೈಪ್ ಅಳವಡಿಕೆ ಕಾಮಗಾರಿಗೂ ಲಕ್ಷ್ಮೀ ಹೆಬ್ಬಾಳಕರ್ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ಕ್ಷೇತ್ರದ ಪ್ರತಿ ಬಡಾವಣೆಯಲ್ಲೂ ಗುಣಮಟ್ಟದ ಮೂಲಸೌಕರ್ಯ ಒದಗಿಸುವುದು, ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವುದು ಹಾಗೂ ನೈರ್ಮಲ್ಯಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.
ಚಿಕ್ಕುಬಾಗ್ನಲ್ಲಿ ₹1.70 ಕೋಟಿ ಕಾಮಗಾರಿ ಪರಿಶೀಲನೆ
ಇದೇ ವೇಳೆ ಚಿಕ್ಕುಬಾಗ್ನಲ್ಲಿ ಸುಮಾರು ₹1.70 ಕೋಟಿ ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ರಸ್ತೆ, ಚರಂಡಿ ಹಾಗೂ ಯುಟಿಲಿಟಿ ಪೈಪ್ ಅಳವಡಿಕೆ ಕಾಮಗಾರಿಯ ಪ್ರಗತಿಯನ್ನು ಲಕ್ಷ್ಮೀ ಹೆಬ್ಬಾಳಕರ್ ಪರಿಶೀಲಿಸಿದರು. ಕಾಮಗಾರಿಯ ಪ್ರಸ್ತುತ ಸ್ಥಿತಿಗತಿಗಳನ್ನು ಅವಲೋಕಿಸಿ, ಅಗತ್ಯವಿರುವ ಸಲಹೆ ಹಾಗೂ ಸೂಚನೆಗಳನ್ನು ನೀಡಿದರು.
ಅಭಿವೃದ್ಧಿ ಕಾಮಗಾರಿಗಳು ಕೇವಲ ಆರಂಭವಾಗುವುದಷ್ಟೇ ಅಲ್ಲದೆ, ಗುಣಮಟ್ಟದೊಂದಿಗೆ ಪೂರ್ಣಗೊಂಡು ಜನರಿಗೆ ಸಮರ್ಪಕವಾಗಿ ಉಪಯೋಗವಾಗಬೇಕು ಎಂಬ ಆಶಯದೊಂದಿಗೆ ಕಾಮಗಾರಿಗಳ ಪ್ರಗತಿಗೆ ಗಮನ ಹರಿಸಲಾಗುತ್ತಿದೆ.
ಈ ಎಲ್ಲ ಕಾರ್ಯಕ್ರಮಗಳಲ್ಲಿ ಸ್ಥಳೀಯ ನಿವಾಸಿಗಳು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಒಟ್ಟಾರೆ ₹11.80 ಕೋಟಿ ವೆಚ್ಚದ ಈ ನಾಲ್ಕು ಅಭಿವೃದ್ಧಿ ಕಾಮಗಾರಿಗಳು ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿವಿಧ ಬಡಾವಣೆಗಳ ರಸ್ತೆ ಸಂಪರ್ಕ, ಒಳಚರಂಡಿ ವ್ಯವಸ್ಥೆ ಹಾಗೂ ಮೂಲಸೌಕರ್ಯ ಸುಧಾರಣೆಗೆ ನೆರವಾಗಲಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




