
ಪ್ರಗತಿವಾಹಿನಿ ಸುದ್ದಿ: ನೂರಾರು ಕನಸುಗಳೊಂದಿಗೆ ಹೊಸ ಜೀವನ ಆರಂಭಿಸಿದ್ದ ನವದಂಪತಿಯ ಬದುಕು ಭೀಕರ ರಸ್ತೆ ಅಪಘಾತದಲ್ಲಿ ದುರಂತ ಅಂತ್ಯ ಕಂಡಿದೆ. ಮದುವೆಯಾಗಿ ಕೆಲವೇ ತಿಂಗಳು ಕಳೆದಿತ್ತು. ಅಷ್ಟರಲ್ಲೇ ಪತಿ-ಪತ್ನಿ ಇಬ್ಬರೂ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದು, ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದೆ.
ಅಪಘಾತದಲ್ಲಿ ಚಿಂತಾಮಣಿ ನಗರದ ಎಂ.ಜಿ. ರಸ್ತೆಯ ಶ್ರೀನಿವಾಸ್ ಜ್ಯುವೆಲ್ಸ್ ಸಮೀಪದ ನಿವಾಸಿಗಳಾದ ಷನ್ಮುಖ (27) ಮತ್ತು ಪತ್ನಿ ಮಿಥುಲ (24) ಮೃತಪಟ್ಟಿದ್ದಾರೆ. ನವದಂಪತಿ ಎಲೆಕ್ಟ್ರಿಕ್ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದಾಗ ಎದುರಿನಿಂದ ಬಂದ ಇಕೋ ಕಾರು ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕಾರು ಮತ್ತು ಎಲೆಕ್ಟ್ರಿಕ್ ಬೈಕ್ ತೀವ್ರವಾಗಿ ಜಖಂಗೊಂಡಿವೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಷನ್ಮುಖ ಮತ್ತು ಮಿಥುಲ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೆಲವೇ ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಜೋಡಿ ಹೀಗೆ ದುರಂತ ಅಂತ್ಯ ಕಂಡಿರುವುದು ಎರಡು ಕುಟುಂಬಗಳಲ್ಲೂ ಶೋಕದ ವಾತಾವರಣ ನಿರ್ಮಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ-ಬೆಂಗಳೂರು ರಸ್ತೆಯಲ್ಲಿ ನಡೆದಿದೆ.
ಇದೇ ಅಪಘಾತದಲ್ಲಿ ಇಕೋ ಕಾರಿನಲ್ಲಿದ್ದ ಸೂರಜ್, ಎಂ.ಎಲ್. ಕುಮಾರ್ ಮತ್ತು ಅತುಲಾ ಎಂಬುವವರಿಗೂ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಶಿವರಾಜ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದು, ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




