CrimeKannada NewsKarnataka NewsLatest

*ಬೈಕ್‌ಗೆ ಒದ್ದು ಕೆಳಕ್ಕೆ ಬೀಳಿಸಿದ ಮೈಕ್ರೋ ಫೈನಾನ್ಸ್ ಏಜೆಂಟರು*: *ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು*

ಪ್ರಗತಿವಾಹಿನಿ ಸುದ್ದಿ: ಮೈಕ್ರೋ ಫೈನಾನ್ಸ್ ಕಂಪನಿಯ ಸಾಲ ವಸೂಲಾತಿ ಏಜೆಂಟರ ವರ್ತನೆಯಿಂದ ಮತ್ತೊಂದು ದುರಂತ ಸಂಭವಿಸಿದೆ. ಬೈಕ್ ಸಾಲದ ಕಂತು ಪಾವತಿಸದ ವಿಚಾರವಾಗಿ ವ್ಯಕ್ತಿಯೊಬ್ಬರ ಬೈಕ್‌ಗೆ ಕಾಲಿನಿಂದ ಒದ್ದು ಕೆಳಕ್ಕೆ ಬೀಳಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ಮೃತರನ್ನು 39 ವರ್ಷದ ಮುರುಳಿ ಎಂದು ಗುರುತಿಸಲಾಗಿದೆ. ಈ ಘಟನೆ ಕುಟುಂಬಸ್ಥರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ನೆಲಮಂಗಲ ತಾಲೂಕಿನ ಟಿ. ಬೇಗೂರಿನ ನಿವಾಸಿ ಮುರುಳಿ, ಬೈಕ್ ಸಾಲದ ಕಂತು ಪಾವತಿಸದ ಹಿನ್ನೆಲೆಯಲ್ಲಿ ಎಲ್ ಅಂಡ್ ಟಿ ಮೈಕ್ರೋ ಫೈನಾನ್ಸ್ ಕಂಪನಿಯ ಏಜೆಂಟರ ಸಂಪರ್ಕಕ್ಕೆ ಬಂದಿದ್ದರು. ಕಳೆದ ಬುಧವಾರ ನೆಲಮಂಗಲದಿಂದ ತಮ್ಮ ಊರಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಬೂದಿಹಾಳು ಬಳಿ ಮೂವರು ಏಜೆಂಟರು ಅವರ ವಾಹನವನ್ನು ಅಡ್ಡಗಟ್ಟಿದ್ದಾರೆ. ಮುಂದೆ ನಿಲ್ಲಿಸುವುದಾಗಿ ಹೇಳಿ ಮುರುಳಿ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಏಜೆಂಟರು ಬೆನ್ನಟ್ಟಿ ಚಲಿಸುತ್ತಿದ್ದ ಬೈಕ್‌ಗೆ ಕಾಲಿನಿಂದ ಒದ್ದಿದ್ದಾರೆ. ಪರಿಣಾಮ ಮುರುಳಿ ಬೈಕ್ ಸಮೇತ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.

ಘಟನೆಯ ಬಳಿಕ ಪತ್ನಿ ಲಲಿತಾ ಅವರು ಮುರುಳಿ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಮುರುಳಿ ಅವರಿಗೆ ಮೊದಲೇ ಎರಡೂ ಕಿಡ್ನಿಗಳು ವೈಫಲ್ಯಗೊಂಡಿದ್ದು, ನಿರಂತರ ಡಯಾಲಿಸಿಸ್ ಪಡೆಯುತ್ತಿದ್ದರು. ಅನಾರೋಗ್ಯದ ನಡುವೆಯೇ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಅವರಿಗೆ ವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ನಿನ್ನೆ ತಡರಾತ್ರಿ ಮೃತಪಟ್ಟಿದ್ದಾರೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

ಪತಿಯ ಸಾವಿಗೆ ಮೈಕ್ರೋ ಫೈನಾನ್ಸ್ ಏಜೆಂಟರ ವರ್ತನೆಯೇ ಕಾರಣ ಎಂದು ಪತ್ನಿ ಲಲಿತಾ ಹಾಗೂ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾಗಿರುವ ಏಜೆಂಟರನ್ನು ಪತ್ತೆಹಚ್ಚಿ ಬಂಧಿಸಲು ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.

Related Articles

Back to top button