Kannada NewsKarnataka NewsLatest

*ಒಬ್ಬರ ಹೆಸರಲ್ಲಿ ಹಲವು ವೋಟರ್ ಐಡಿ*: *ಮತದಾರರ ಪಟ್ಟಿಯಲ್ಲಿ ಬಯಲಾಯ್ತು ಎಡವಟ್ಟು*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕದ ಮತದಾರರ ಪಟ್ಟಿಯಲ್ಲಿ ಗಂಭೀರ ಲೋಪಗಳು ಬೆಳಕಿಗೆ ಬಂದಿವೆ. ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ವೋಟರ್ ಐಡಿಗಳು ಸೃಷ್ಟಿಯಾಗಿರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲ, ಒಂದೇ ಮತದಾರರ ಹೆಸರು ಎರಡು ವಿಧಾನಸಭಾ ಕ್ಷೇತ್ರಗಳ ಪಟ್ಟಿಯಲ್ಲೂ ಕಾಣಿಸಿಕೊಂಡಿದೆ.

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಈ ಅಕ್ರಮಗಳಲ್ಲ, ಆಡಳಿತಾತ್ಮಕ ಲೋಪಗಳ ವಿವರ ಹೊರಬಂದಿರುವುದು ಚರ್ಚೆಗೆ ಕಾರಣವಾಗಿದೆ. ಈ ತಪ್ಪುಗಳನ್ನು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಕಚೇರಿಯೇ ಒಪ್ಪಿಕೊಂಡಿದ್ದು, ಚುನಾವಣಾ ವ್ಯವಸ್ಥೆಯ ನಿಖರತೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ.

ಮುಖ್ಯ ಚುನಾವಣಾಧಿಕಾರಿ ಕಚೇರಿ ನೀಡಿರುವ ಸ್ಪಷ್ಟನೆಯ ಪ್ರಕಾರ, ಮತದಾರರ ಅರ್ಜಿಗಳನ್ನು ನಿರ್ವಹಿಸುವಾಗ ಎರಡು ರೀತಿಯ ಲೋಪಗಳು ಸಂಭವಿಸಿವೆ. ಕೆಲವರು ನಾಗರಿಕ ಸೇವಾ ಪೋರ್ಟಲ್ ಮೂಲಕ ಒಂದಕ್ಕಿಂತ ಹೆಚ್ಚು ಬಾರಿ ಫಾರ್ಮ್ 6 ಸಲ್ಲಿಸಿದ್ದಾರೆ. ಈ ಅರ್ಜಿಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿ ಅನುಮೋದಿಸಿದ ಪರಿಣಾಮ, ಒಂದೇ ವ್ಯಕ್ತಿಗೆ ಹಲವು ಎಲೆಕ್ಟ್ರರ್ ಫೋಟೋ ಐಡೆಂಟಿಟಿ ಕಾರ್ಡ್ (EPIC) ಸಂಖ್ಯೆಗಳು ನೀಡಲಾಗಿದೆ.

SIR ಪ್ರಕ್ರಿಯೆಯ ಪ್ರಮುಖ ಉದ್ದೇಶವೇ ಮತದಾರರ ಪಟ್ಟಿಯಲ್ಲಿನ ನಕಲಿ ನೋಂದಣಿಗಳನ್ನು ಪತ್ತೆಹಚ್ಚಿ ತೆಗೆದುಹಾಕುವುದಾಗಿತ್ತು. ಆದರೆ ಇದೇ ಪ್ರಕ್ರಿಯೆಯಲ್ಲಿ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಹಲವು ಗುರುತಿನ ಚೀಟಿಗಳು ಸೃಷ್ಟಿಯಾಗಿರುವುದು ಹೇಗೆ ಎಂಬ ಪ್ರಶ್ನೆ ಈಗ ಎದುರಾಗಿದೆ.

ಇನ್ನೊಂದು ಲೋಪ ವಿಳಾಸ ಬದಲಾವಣೆಗೆ ಸಂಬಂಧಿಸಿದೆ. ಮತದಾರರು ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ಸ್ಥಳಾಂತರಗೊಂಡಾಗ, ಹೊಸ ಕ್ಷೇತ್ರದ ಪಟ್ಟಿಗೆ ಹೆಸರು ಸೇರಿಸಲು ಫಾರ್ಮ್ 8 ಸಲ್ಲಿಸಿದ್ದರು. ಹೊಸ ಕ್ಷೇತ್ರದಲ್ಲಿ ಹೆಸರು ಸೇರ್ಪಡೆಯಾದರೂ, ಹಳೆಯ ಕ್ಷೇತ್ರದ ಪಟ್ಟಿಯಿಂದ ಹೆಸರು ತೆಗೆದುಹಾಕಲು ಸಲ್ಲಿಸಿದ್ದ ಫಾರ್ಮ್ 7 ಅರ್ಜಿಗಳು ಬಾಕಿ ಉಳಿದಿದ್ದವು. ಹೀಗಾಗಿ ಒಂದೇ ಮತದಾರರ ಹೆಸರು ಎರಡು ಕ್ಷೇತ್ರಗಳ ಪಟ್ಟಿಗಳಲ್ಲೂ ಉಳಿದುಕೊಂಡಿದೆ.

ಈ ಪ್ರಕರಣಗಳನ್ನು ಪರಿಶೀಲಿಸಿ ಕಾನೂನುಬದ್ಧ ತಿದ್ದುಪಡಿ ಕ್ರಮ ಕೈಗೊಳ್ಳಲು ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಮತದಾರರ ನೋಂದಣಾಧಿಕಾರಿಗಳಿಗೆ ವರ್ಗಾಯಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.

ಆದರೆ ಈ ಲೋಪದಿಂದ ಎಷ್ಟು ಮಂದಿ ಮತದಾರರು ಪ್ರಭಾವಿತರಾಗಿದ್ದಾರೆ? ಎಷ್ಟು ನಕಲಿ ನೋಂದಣಿಗಳಿವೆ? ತಿದ್ದುಪಡಿ ಪ್ರಕ್ರಿಯೆ ಯಾವಾಗ ಪೂರ್ಣಗೊಳ್ಳಲಿದೆ? ಎಂಬ ಪ್ರಶ್ನೆಗಳಿಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಅಂತಿಮ ಮತದಾರರ ಪಟ್ಟಿ ಪ್ರಕಟಣೆಗೆ ಮುನ್ನ ಜಾರಿಯಲ್ಲಿರುವ ಕಾನೂನುಬದ್ಧ ನಿರ್ಬಂಧಗಳಿಂದ ತಿದ್ದುಪಡಿ ವಿಳಂಬವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಿನಲ್ಲಿ, ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಉದ್ದೇಶದ SIR ಪ್ರಕ್ರಿಯೆಯಲ್ಲೇ ಇಂತಹ ಲೋಪಗಳು ಪತ್ತೆಯಾಗಿರುವುದು ಈಗ ಹೊಸ ಚರ್ಚೆಗೆ ಕಾರಣವಾಗಿದೆ.

Related Articles

Back to top button