CrimeLatestNational

*ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿ ಕಿಟಕಿಯಿಂದ ಎಸೆದ ಅಪ್ರಾಪ್ತೆ*

ಪ್ರಗತಿವಾಹಿನಿ ಸುದ್ದಿ: ಹೊಟ್ಟೆ ನೋವೆಂದು ಆಸ್ಪತ್ರೆಗೆ ದಾಖಲಾಗಿದ್ದ 16 ವರ್ಷದ ಬಾಲಕಿಯೊಬ್ಬಳು ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ನವಜಾತ ಶಿಶುವನ್ನು ಕಿಟಕಿಯಿಂದ ಹೊರಗೆ ಎಸೆದಿರುವ ಘಟನೆ ನಡೆದಿದೆ.

ಮಗು ಗಂಭೀರವಾಗಿ ಗಾಯಗೊಂಡ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬಾಲಕಿ ಶುಕ್ರವಾರ ತಡರಾತ್ರಿ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದಳು. ಹೀಗಾಗಿ ಕುಟುಂಬದವರು ಆಕೆಯನ್ನು ಉತ್ತರಪಾರ ಪುರಸಭೆ ವ್ಯಾಪ್ತಿಯ ನರ್ಸಿಂಗ್ ಹೋಂಗೆ ಕರೆತಂದಿದ್ದಾರೆ. ಬಾಲಕಿ ಗರ್ಭಿಣಿಯಾಗಿರುವ ವಿಚಾರ ಕುಟುಂಬದವರಿಗೆ ತಿಳಿದಿರಲಿಲ್ಲ ಎಂದು ಆಕೆಯ ತಾಯಿ ಪೊಲೀಸರಿಗೆ ತಿಳಿಸಿದ್ದಾರೆ.

ಶನಿವಾರ ಬೆಳಗ್ಗೆ ಹೊಟ್ಟೆ ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಬಾಲಕಿ ಶೌಚಾಲಯಕ್ಕೆ ತೆರಳಿದ್ದಾಳೆ. ಅಲ್ಲಿ ಯಾರ ಸಹಾಯವೂ ಇಲ್ಲದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ನವಜಾತ ಶಿಶುವನ್ನು ಶೌಚಾಲಯದ ಕಿಟಕಿಯಿಂದ ಹೊರಗೆ ಎಸೆದಿದ್ದಾಳೆ ಎಂದು ನರ್ಸಿಂಗ್ ಹೋಂ ಆಡಳಿತ ಮಂಡಳಿ ತಿಳಿಸಿದೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ನವಜಾತ ಶಿಶು ಶೌಚಾಲಯದ ಹೊರಗೆ ನವಜಾತ ಶಿಶು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ದಾರಿಹೋಕರೊಬ್ಬರು ಗಮನಿಸಿದ್ದಾರೆ. ತಕ್ಷಣವೇ ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ನರ್ಸಿಂಗ್ ಹೋಂನ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮಗುವನ್ನು ಒಳಗೆ ಕರೆತಂದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಮಗು ಮೃತಪಟ್ಟಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಸಾಮಾನ್ಯ ಆರೋಗ್ಯ ಸಮಸ್ಯೆ ಎಂದು ಭಾವಿಸಿ ನರ್ಸಿಂಗ್ ಹೋಂಗೆ ಕರೆತಂದಿದ್ದಾಗಿ ತಿಳಿಸಿದ್ದಾರೆ. ನರ್ಸಿಂಗ್ ಹೋಂ ಸಿಬ್ಬಂದಿ ಕೂಡ ಬಾಲಕಿಯ ಗರ್ಭಧಾರಣೆಯ ಬಗ್ಗೆ ವಿಚಾರಿಸಿದ್ದರು. ಆದರೆ ಆಕೆ ಈ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಸಂಸ್ಥೆಯ ಮಾಲಕಿ ಸುಚೇತಾ ಮುಖರ್ಜಿ ಹೇಳಿದ್ದಾರೆ.

ಸಿಸಿಟಿವಿ ದೃಶ್ಯ ಪರಿಶೀಲನೆಗೆ ಮುಂದಾದ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನರ್ಸಿಂಗ್ ಹೋಂನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲು ಮುಂದಾಗಿದ್ದಾರೆ. ಬಾಲಕಿ, ಆಕೆಯ ಪೋಷಕರು, ಕುಟುಂಬದವರು ಹಾಗೂ ನರ್ಸಿಂಗ್ ಹೋಂ ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ನವಜಾತ ಶಿಶುವಿನ ಸಾವಿಗೆ ನಿಖರ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆ ನಡೆಸುವ ಸಾಧ್ಯತೆಯೂ ಇದೆ.

ಇದೇ ನರ್ಸಿಂಗ್ ಹೋಂ ಆವರಣದಲ್ಲಿ ಈ ಹಿಂದೆಯೂ ಭ್ರೂಣ ಪತ್ತೆಯಾಗಿತ್ತು ಎಂದು ಸ್ಥಳೀಯರೊಬ್ಬರು ಆರೋಪಿಸಿದ್ದಾರೆ. ಹೀಗಾಗಿ ಹಿಂದಿನ ಘಟನೆಗಳ ಬಗ್ಗೆಯೂ ತನಿಖೆ ನಡೆಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.


Related Articles

Back to top button