CrimeKannada NewsKarnataka NewsLatest

*ಕನ್ನಡ ಬಾವುಟವೇ ಕೊಲೆಗೆ ಅಸ್ತ್ರ*: *ಸ್ವಂತ ಮಗನ ಹತ್ಯೆಗೆ ತಾಯಿಯಿಂದಲೇ ಸುಪಾರಿ!*

ಪ್ರಗತಿವಾಹಿನಿ ಸುದ್ದಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆ ಎಂಬ ಕಾರಣಕ್ಕೆ ಹೆತ್ತ ತಾಯಿಯೇ ತನ್ನ ಪ್ರಿಯಕರನ ಜೊತೆ ಸೇರಿ ಸ್ವಂತ ಮಗನ ಹತ್ಯೆಗೆ ಸಂಚು ರೂಪಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕನ್ನಡ ರಾಜ್ಯೋತ್ಸವದ ಸಂಭ್ರಮ ನೋಡಲು ಬರುವಂತೆ ಮಗನನ್ನು ಕರೆಸಿಕೊಂಡು, ಕನ್ನಡ ಬಾವುಟದಿಂದಲೇ ಕುತ್ತಿಗೆ ಬಿಗಿದು ಕೊಲೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಆರ್.ಟಿ. ನಗರ ನಿವಾಸಿ ವಿಜಯ್ ನಾರಾಯಣ (24) ಕೊಲೆಯಾದ ಯುವಕ. ಬೆಂಗಳೂರಿನ ಬ್ಯೂಟಿ ಪಾರ್ಲರ್‌ನಲ್ಲಿ ಮ್ಯಾನೇಜರ್ ಆಗಿದ್ದ ವಿಜಯ್‌ ತಾಯಿ ಮೀನಾ, ಮಹಾರಾಷ್ಟ್ರ ಮೂಲದ ರಾಕೇಶ್ ಎಂಬಾತನೊಂದಿಗೆ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಮಗನಿಗೆ ಅನುಮಾನ ಬರಬಾರದು ಎಂಬ ಕಾರಣಕ್ಕೆ ರಾಕೇಶ್‌ನನ್ನು ತನ್ನ ಕಾರು ಚಾಲಕನನ್ನಾಗಿ ನೇಮಿಸಿಕೊಂಡಿದ್ದಳು.

ಆದರೆ ತಾಯಿಯ ಸಂಬಂಧದ ವಿಚಾರ ತಿಳಿದ ವಿಜಯ್ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ. ಇದರಿಂದ ತಮ್ಮ ಸಂಬಂಧಕ್ಕೆ ಮಗನೇ ಅಡ್ಡಿಯಾಗುತ್ತಿದ್ದಾನೆ ಎಂದು ಭಾವಿಸಿದ ಮೀನಾ ಮತ್ತು ರಾಕೇಶ್ ಆತನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ.

ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ ನೋಡಲು ಬೆಳಗಾವಿಗೆ ಹೋಗೋಣ ಎಂದು ನಂಬಿಸಿ ರಾಕೇಶ್ ಮತ್ತು ಆತನ ಸ್ನೇಹಿತರು ವಿಜಯ್‌ನನ್ನು ಕರೆದುಕೊಂಡು ಬಂದಿದ್ದರು. ಬಳಿಕ ರಾತ್ರಿ ಹೆದ್ದಾರಿ ಪಕ್ಕದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಕನ್ನಡ ಬಾವುಟದಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾನೆ. ಈ ವೇಳೆ ಮೀನಾ ಬೆಂಗಳೂರಿನಲ್ಲೇ ಇದ್ದುಕೊಂಡು ಫೋನ್ ಮೂಲಕ ಮಗನ ಹತ್ಯೆಯ ಬೆಳವಣಿಗೆಗಳ ಮಾಹಿತಿ ಪಡೆಯುತ್ತಿದ್ದಳು ಎನ್ನಲಾಗಿದೆ.

ಇತ್ತ ನಿರ್ಜನ ಪ್ರದೇಶದಲ್ಲಿ ಅಪರಿಚಿತ ಯುವಕನ ಮೃತದೇಹ ಪತ್ತೆಯಾದ ಬಳಿಕ ಮಾಳಮಾರುತಿ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದರು. ಮೃತನ ಗುರುತನ್ನು ವಿಜಯ್ ನಾರಾಯಣ ಎಂದು ಪತ್ತೆಹಚ್ಚಿದ ಪೊಲೀಸರು, ಆತನ ತಾಯಿ ಮೀನಾಳನ್ನು ವಿಚಾರಣೆಗೆ ಕರೆದಿದ್ದರು. ಆಕೆ ನೀಡಿದ ಸಂಶಯಾಸ್ಪದ ಉತ್ತರಗಳಿಂದ ಪೊಲೀಸರಿಗೆ ಅನುಮಾನ ಹೆಚ್ಚಾಗಿದೆ.

ಬಳಿಕ ಮೀನಾ, ವಿಜಯ್ ಮತ್ತು ರಾಕೇಶ್ ಅವರ ಮೊಬೈಲ್ ಕರೆಗಳ ವಿವರಗಳನ್ನು ಪರಿಶೀಲಿಸಿ ವಿಚಾರಣೆ ನಡೆಸಿದಾಗ ಪ್ರಕರಣದ ಹಲವು ಸಂಗತಿಗಳು ಹೊರಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೀನಾ, ಆಕೆಯ ಪ್ರಿಯಕರ ರಾಕೇಶ್ ಹಾಗೂ ಆತನ ಸ್ನೇಹಿತರಾದ ಸಚಿನ್, ಮನೋಜ್, ತಮ್ಮಣ್ಣ ಮತ್ತು ಏಕನಾಥ ಸೇರಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ.

ಅಕ್ರಮ ಸಂಬಂಧದ ವಿಚಾರವಾಗಿ ಆರಂಭವಾದ ಕುಟುಂಬದ ಕಲಹ ಕೊನೆಗೆ ಯುವಕನ ಬರ್ಬರ ಹತ್ಯೆಯಲ್ಲಿ ಅಂತ್ಯಗೊಂಡಿರುವುದು ಆಘಾತ ಮೂಡಿಸಿದೆ. ಕನ್ನಡ ರಾಜ್ಯೋತ್ಸವದ ಬಾವುಟವನ್ನೇ ಕೊಲೆಗೆ ಬಳಸಲಾಗಿದೆ ಎಂಬ ಆರೋಪ ಪ್ರಕರಣವನ್ನು ಮತ್ತಷ್ಟು ಭೀಕರಗೊಳಿಸಿದೆ.

Related Articles

Back to top button