FoodsKannada NewsKarnataka NewsLatestNational

*ಗೋಧಿ ಬೆಲೆಯಲ್ಲೂ ಭಾರಿ ಏರಿಕೆ*: *ಒಂದೇ ವಾರದಲ್ಲಿ ಶೇ.20ರಷ್ಟು ಹೆಚ್ಚಳ*

ಪ್ರಗತಿವಾಹಿನಿ ಸುದ್ದಿ: ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಇದೀಗ ಗೋಧಿ ಬೆಲೆಯೂ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ. ಕಳೆದ ಒಂದು ವಾರದಲ್ಲೇ ಗೋಧಿ ಬೆಲೆಯಲ್ಲಿ ಶೇ.20ರಷ್ಟು ಏರಿಕೆಯಾಗಿದ್ದು, ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್‌ಗೆ ₹4,800ರಿಂದ ₹5,200ರವರೆಗೆ ಮಾರಾಟವಾಗುತ್ತಿದೆ.

ಈ ಹಿಂದೆ ಸಗಟು ಮಾರುಕಟ್ಟೆಯಲ್ಲಿ ಗೋಧಿ ಪ್ರತಿ ಕ್ವಿಂಟಾಲ್‌ಗೆ ₹3,500ರಿಂದ ₹4,000ರ ಆಸುಪಾಸಿನಲ್ಲಿ ಮಾರಾಟವಾಗುತ್ತಿತ್ತು. ಆದರೆ, ಕಳೆದ ಕೆಲ ದಿನಗಳಿಂದ ಬೆಲೆ ಏರಿಕೆಯಾಗಿದ್ದು, ಗ್ರಾಹಕರು ಹಾಗೂ ವ್ಯಾಪಾರಿಗಳ ಮೇಲೆ ಪರಿಣಾಮ ಬೀರಿದೆ.

ಕಲಬುರಗಿ ಮಾರುಕಟ್ಟೆಯಲ್ಲಿಯೂ ಗೋಧಿ ಬೆಲೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಪ್ರತಿಷ್ಠಿತ ಬ್ರ್ಯಾಂಡ್‌ಗಳ ಗೋಧಿ ದರದಲ್ಲಿ ಪ್ರತಿ ಕ್ವಿಂಟಾಲ್‌ಗೆ ₹1,000ರಿಂದ ₹1,500ರವರೆಗೆ ಹೆಚ್ಚಳವಾಗಿದ್ದರೆ, ಇತರೆ ಗೋಧಿ ತಳಿಗಳ ಬೆಲೆಯೂ ₹400ರಿಂದ ₹600ರಷ್ಟು ಏರಿಕೆಯಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ರಾಜ್ಯಕ್ಕೆ ಅಗತ್ಯವಿರುವ ಒಟ್ಟು ಗೋಧಿಯ ಪೈಕಿ ಕೇವಲ ಶೇ.20ರಷ್ಟು ಮಾತ್ರ ಕರ್ನಾಟಕದಲ್ಲಿ ಉತ್ಪಾದನೆಯಾಗುತ್ತದೆ. ಉಳಿದ ಗೋಧಿಗಾಗಿ ಹೊರರಾಜ್ಯಗಳ ಮೇಲೆ ಅವಲಂಬಿಸಬೇಕಾಗಿದೆ. ಅದರಲ್ಲೂ ಗೋಧಿ ಉತ್ಪಾದನೆಯಲ್ಲಿ ಪ್ರಮುಖ ಸ್ಥಾನ ಹೊಂದಿರುವ ಮಧ್ಯಪ್ರದೇಶದಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಉತ್ಪಾದನೆ ಗಣನೀಯವಾಗಿ ಕುಸಿದಿದೆ. ಇದರಿಂದ ಮಾರುಕಟ್ಟೆಯಲ್ಲಿ ಗೋಧಿ ಪೂರೈಕೆ ಕಡಿಮೆಯಾಗಿ ಬೆಲೆ ಏರಿಕೆಯಾಗಿದೆ ಎನ್ನಲಾಗಿದೆ.

ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಗೋಧಿ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಪ್ರಸ್ತುತ ₹5 ಸಾವಿರದ ಆಸುಪಾಸಿನಲ್ಲಿರುವ ಬ್ರ್ಯಾಂಡೆಡ್ ಗೋಧಿ ದರ ₹6 ಸಾವಿರದ ಗಡಿ ದಾಟುವ ಸಾಧ್ಯತೆಯಿದೆ ಎಂದು ಎಪಿಎಂಸಿ ವರ್ತಕರು ಅಂದಾಜಿಸಿದ್ದಾರೆ.

ಈಗಾಗಲೇ ಹಾಲು, ಮೊಸರು, ಬಸ್ ಪ್ರಯಾಣ ದರ ಸೇರಿದಂತೆ ಹಲವು ಅಗತ್ಯ ಸೇವೆ ಮತ್ತು ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಗೋಧಿ ಬೆಲೆ ಏರಿಕೆಯೂ ಮತ್ತೊಂದು ಹೊಡೆತ ನೀಡಿದೆ.

Related Articles

Back to top button