*ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಗಾಂಜಾ, ಚರಸ್ ಪತ್ತೆ*: *ಪತ್ನಿಯನ್ನು ನೋಡಲು ಬಂದಿದ್ದ ವ್ಯಕ್ತಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದ ಬಿಮ್ಸ್ ಆಸ್ಪತ್ರೆಯ ಹೆರಿಗೆ ವಿಭಾಗದ ಆವರಣದಲ್ಲಿ ಮಾದಕ ವಸ್ತುಗಳೊಂದಿಗೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಉಜ್ವಲ್ ನಗರದ ನಿವಾಸಿ ಅಬ್ದುಲ್ ಬೇಪಾರಿ ಬಂಧಿತ ಆರೋಪಿಯಾಗಿದ್ದು, ತನ್ನ ಪತ್ನಿಗೆ ಹೆರಿಗೆಯಾಗಿರುವ ಹಿನ್ನೆಲೆಯಲ್ಲಿ ಆಕೆಯನ್ನು ನೋಡಲು ಆಸ್ಪತ್ರೆಗೆ ಬಂದಿದ್ದ ಎಂದು ತಿಳಿದುಬಂದಿದೆ.
ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗೃಹರಕ್ಷಕ ಸಿಬ್ಬಂದಿ ಕಲ್ಮೇಶ ಹುಕಳಿ ಅವರಿಗೆ ವ್ಯಕ್ತಿಯ ವರ್ತನೆ ಅನುಮಾನಾಸ್ಪದವಾಗಿ ಕಂಡಿದೆ. ಹೀಗಾಗಿ ಆತನನ್ನು ತಪಾಸಣೆ ನಡೆಸಿದಾಗ ಜೇಬು ಹಾಗೂ ಬಟ್ಟೆಗಳಲ್ಲಿ ಅಡಗಿಸಿಟ್ಟಿದ್ದ ಒಂದು ಪ್ಯಾಕೆಟ್ ಗಾಂಜಾ ಮತ್ತು 30ಕ್ಕೂ ಹೆಚ್ಚು ಚರಸ್ ಪ್ಯಾಕೆಟ್ಗಳು ಪತ್ತೆಯಾಗಿವೆ.
ಕೂಡಲೇ ಗೃಹರಕ್ಷಕ ಸಿಬ್ಬಂದಿ ಎಪಿಎಂಸಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗೆ ಮಾದಕ ವಸ್ತುಗಳು ಎಲ್ಲಿಂದ ದೊರೆತವು? ಅವುಗಳನ್ನು ಯಾರಿಗೆ ಪೂರೈಸಲು ತಂದಿದ್ದ? ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




