*‘ನನ್ನ ವಿರುದ್ಧದ ಅತ್ಯಾಚಾರ ಪ್ರಕರಣದ ಹಿಂದೆ ಗೀತೂ ಕೈವಾಡ’*: *ಯಶ್ ಚಿತ್ರದ ನಿರ್ದೇಶಕಿ ವಿರುದ್ಧ ನಿರ್ದೇಶಕನ ಸ್ಫೋಟಕ ಆರೋಪ*

ಪ್ರಗತಿವಾಹಿನಿ ಸುದ್ದಿ: ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ನಿರ್ದೇಶನದ ಮೂಲಕ ಗಮನ ಸೆಳೆದಿರುವ ಗೀತೂ ಮೋಹನ್ದಾಸ್ ಇದೀಗ ಹೊಸ ವಿವಾದದ ಕೇಂದ್ರವಾಗಿದ್ದಾರೆ. ಮಲಯಾಳಂ ನಿರ್ದೇಶಕ ಲಿಜು ಕೃಷ್ಣನ್ ಅವರ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಾಲಯ ನಿರ್ದೋಷಿ ಎಂದು ತೀರ್ಪು ನೀಡಿದೆ. ಈ ತೀರ್ಪಿನ ಬೆನ್ನಲ್ಲೇ ಲಿಜು, ತಮ್ಮ ವಿರುದ್ಧದ ಪ್ರಕರಣದ ಹಿಂದೆ ಗೀತೂ ಮೋಹನ್ದಾಸ್ ಅವರ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
2022ರಲ್ಲಿ ಮಲಯಾಳಂ ನಿರ್ದೇಶಕ ಲಿಜು ಕೃಷ್ಣನ್ ಅವರನ್ನು ‘ಪಡವೆಟ್ಟು’ ಸಿನಿಮಾದ ಚಿತ್ರೀಕರಣದ ಸೆಟ್ನಿಂದಲೇ ಪೊಲೀಸರು ಬಂಧಿಸಿದ್ದರು. ಯುವತಿಯೊಬ್ಬರು ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದ ಆರೋಪದಡಿ ದೂರು ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯ ಇತ್ತೀಚೆಗೆ ಸಾಕ್ಷ್ಯಗಳ ಕೊರತೆಯಿಂದ ಲಿಜು ಅವರನ್ನು ನಿರ್ದೋಷಿ ಎಂದು ಘೋಷಿಸಿದೆ.
ತೀರ್ಪಿನ ಬಳಿಕ ಮಾತನಾಡಿರುವ ಲಿಜು, ಈ ಪ್ರಕರಣದ ಹಿಂದೆ ‘ಟಾಕ್ಸಿಕ್’ ನಿರ್ದೇಶಕಿ ಗೀತೂ ಮೋಹನ್ದಾಸ್ ಅವರ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ತಮ್ಮ ಮೊದಲ ಸಿನಿಮಾ ‘ಪಡವೆಟ್ಟು’ ಆರಂಭವಾಗುವ ಮೊದಲೇ ಕಥೆಯ ವಿಚಾರವಾಗಿ ಗೀತೂ ಮತ್ತು ತಮ್ಮ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಅದು ಕ್ರಮೇಣ ಜಗಳವಾಗಿ ದ್ವೇಷಕ್ಕೆ ಕಾರಣವಾಯಿತು. ಇದೇ ವೈಮನಸ್ಸಿನಿಂದ ತಮ್ಮ ವಿರುದ್ಧ ಪ್ರಕರಣ ದಾಖಲಿಸಲಾಯಿತು ಎಂದು ಲಿಜು ಆರೋಪಿಸಿದ್ದಾರೆ.
ಅಷ್ಟೇ ಅಲ್ಲ, ತಮ್ಮನ್ನು ‘ಪಡವೆಟ್ಟು’ ಸಿನಿಮಾದಿಂದ ಹೊರಗಿಡುವುದು ಮತ್ತು ಚಿತ್ರದ ಬಿಡುಗಡೆ ತಡೆಯುವುದು ಗೀತೂ ಅವರ ಉದ್ದೇಶವಾಗಿತ್ತು ಎಂದು ದೂರಿದ್ದಾರೆ. ತಮ್ಮ ಬಂಧನದ ಬಳಿಕ ಗೀತೂ ಪ್ರಭಾವ ಬಳಸಿ ಸಿನಿಮಾದ ಬಿಡುಗಡೆಗೆ ಅಡ್ಡಿಪಡಿಸಿದರು. ಭಾರತದ ವಿವಿಧ ಸಿನಿಮಾ ಸಂಘಟನೆಗಳಿಗೂ ತಮ್ಮ ವಿರುದ್ಧ ನೋಟಿಸ್ಗಳನ್ನು ಕಳುಹಿಸಿದ್ದರು ಎಂದು ಆರೋಪಿಸಿದ್ದಾರೆ.
WCC ಸಂಘಟನೆಯನ್ನೂ ಬಳಸಿಕೊಂಡ ಆರೋಪ!
ಗೀತೂ ಮೋಹನ್ದಾಸ್ ಅವರು ವಿಮೆನ್ ಇನ್ ಸಿನಿಮಾ ಕಲೆಕ್ಟಿವ್ (WCC) ಸಂಘಟನೆಯನ್ನು ತಮ್ಮ ವಿರುದ್ಧ ದುರುದ್ದೇಶದಿಂದ ಬಳಸಿಕೊಂಡಿದ್ದಾರೆ ಎಂಬುದು ಲಿಜು ಅವರ ಮತ್ತೊಂದು ಆರೋಪ. ವೈಯಕ್ತಿಕ ದ್ವೇಷ ಮತ್ತು ಅಹಂ ತೀರಿಸಿಕೊಳ್ಳಲು ಸಂಘಟನೆಯ ಪ್ರಭಾವವನ್ನು ಬಳಸಿಕೊಂಡಿದ್ದಾರೆ ಎಂದು ಅವರು ದೂರಿದ್ದಾರೆ.
ತಮ್ಮ ವಿರುದ್ಧ ದಾಖಲಾದ ಪ್ರಕರಣದ ವಿಚಾರಣೆಯಲ್ಲಿಯೂ ಗೀತೂ ಅವರ ಕೈವಾಡದ ವಿಚಾರ ಪ್ರಸ್ತಾಪವಾಗಿತ್ತು ಎಂದು ಲಿಜು ಹೇಳಿದ್ದಾರೆ.
ಒಟ್ಟಿನಲ್ಲಿ, ನ್ಯಾಯಾಲಯದ ತೀರ್ಪಿನ ಬಳಿಕ ಲಿಜು ಕೃಷ್ಣನ್ ಮಾಡಿರುವ ಈ ಆರೋಪಗಳು ಮಲಯಾಳಂ ಚಿತ್ರರಂಗದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.




