*ಅಳ್ನಾವರ, ಹಳಿಯಾಳದಲ್ಲಿ ಲಕ್ಷ್ಮೀತಾಯಿ ಸೌಹಾರ್ದ ಸಹಕಾರಿ ಸಂಘದ 11 ಮತ್ತು 12ನೇ ಶಾಖೆ ಉದ್ಘಾಟನೆ*

ಪ್ರಗತಿವಾಹಿನಿ ಸುದ್ದಿ: ಹಳಿಯಾಳ/ ಅಳ್ನಾವರ: ಧಾರವಾಡ ಜಿಲ್ಲೆಯ ಅಳ್ನಾವರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಲಕ್ಷ್ಮೀತಾಯಿ ಸೌಹಾರ್ದ ಸಹಕಾರಿ ಸಂಘ ನಿಯಮಿತದ 11ನೇ ಮತ್ತು 12ನೇ ನೂತನ ಶಾಖೆಗಳನ್ನು ವಿಧಾನ ಪರಿಷತ್ ಸದಸ್ಯರು ಹಾಗೂ ಸಂಘದ ಅಧ್ಯಕ್ಷರಾದ ಚನ್ನರಾಜ ಹಟ್ಟಿಹೊಳಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಒಂದು ಸಂಸ್ಥೆಯ ಬೆಳವಣಿಗೆ ಎಂದರೆ ಕೇವಲ ಶಾಖೆಗಳ ಸಂಖ್ಯೆ ಹೆಚ್ಚಾಗುವುದಲ್ಲ, ಜನರು ಸಂಸ್ಥೆಯ ಮೇಲೆ ಇಟ್ಟಿರುವ ವಿಶ್ವಾಸ ವೃದ್ಧಿಯಾಗುವುದಾಗಿದೆ. ಸಾಮಾನ್ಯ ಜನರು, ಸಣ್ಣ ವ್ಯಾಪಾರಿಗಳು, ಉದ್ಯಮಿಗಳು, ರೈತರು, ಮಹಿಳೆಯರು ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಸುಲಭವಾಗಿ ಆರ್ಥಿಕ ಸೇವೆ ಒದಗಿಸುವ ಉದ್ದೇಶದಿಂದ ಸಂಸ್ಥೆಯನ್ನು ಆರಂಭಿಸಲಾಗಿದ್ದು, ಇದೀಗ ಆ ಕನಸು ಹಂತ ಹಂತವಾಗಿ ನನಸಾಗುತ್ತಿದೆ ಎಂದರು.

2025-26ನೇ ಸಾಲಿನಲ್ಲಿ ಸಂಸ್ಥೆಯ ಠೇವಣಿಗಳ ಪ್ರಮಾಣ 110.90 ಕೋಟಿ ರೂ., ಉಳಿತಾಯ ಠೇವಣಿಗಳು 69.80 ಕೋಟಿ ರೂ. ಹಾಗೂ ನಿವ್ವಳ ಲಾಭ 52.10 ಲಕ್ಷ ರೂ. ತಲುಪಿದೆ. ಸಂಸ್ಥೆಯ ಆರ್ಥಿಕ ಶಿಸ್ತು, ಪಾರದರ್ಶಕ ಆಡಳಿತ ಮತ್ತು ಗ್ರಾಹಕ ಸ್ನೇಹಿ ಸೇವೆಯಿಂದ ಈ ಸಾಧನೆ ಸಾಧ್ಯವಾಗಿದೆ. ಇವು ಕೇವಲ ಅಂಕಿ-ಅಂಶಗಳಲ್ಲ, ಸಂಸ್ಥೆಯ ಮೇಲೆ ಗ್ರಾಹಕರು ಇಟ್ಟಿರುವ ವಿಶ್ವಾಸದ ಪ್ರತಿಬಿಂಬಗಳಾಗಿವೆ ಎಂದು ಅವರು ಹೇಳಿದರು.
ಬೆಳಗಾವಿ ಜಿಲ್ಲೆಗೆ ಸೀಮಿತವಾಗದೆ ಇತರ ಜಿಲ್ಲೆಗಳಿಗೂ ಸೇವೆ ವಿಸ್ತರಿಸುವ ಉದ್ದೇಶದಿಂದ ಅಳ್ನಾವರ ಮತ್ತು ಹಳಿಯಾಳದಲ್ಲಿ ಹೊಸ ಶಾಖೆಗಳನ್ನು ಆರಂಭಿಸಲಾಗಿದೆ. ಶಾಖೆಗಳು ಹೆಚ್ಚಾದಂತೆ ಜವಾಬ್ದಾರಿಯೂ ಹೆಚ್ಚಾಗುತ್ತದೆ. ಪ್ರತಿಯೊಬ್ಬ ಗ್ರಾಹಕರನ್ನು ಗೌರವದಿಂದ ಕಾಣುವುದು, ಅವರ ಆರ್ಥಿಕ ಅಗತ್ಯಗಳಿಗೆ ಸ್ಪಂದಿಸುವುದು ಮತ್ತು ವಿಶ್ವಾಸಾರ್ಹ ಸೇವೆ ನೀಡುವುದು ಸಂಸ್ಥೆಯ ಆದ್ಯತೆಯಾಗಿರಬೇಕು. ಲಾಭಕ್ಕಿಂತಲೂ ಗ್ರಾಹಕರು ಇಡುವ ವಿಶ್ವಾಸವೇ ದೊಡ್ಡದು ಎಂದು ಚನ್ನರಾಜ ಹಟ್ಟಿಹೊಳಿ ತಿಳಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಮಹಾಂತೇಶ ಮತ್ತಿಕೊಪ್ಪ, ಕಾರ್ಯನಿರ್ವಾಹಕ ಸಾಗರ್ ಇಂಗಳಗಿ ಸೇರಿದಂತೆ ಸಂಘದ ಪದಾಧಿಕಾರಿಗಳು, ಸಿಬ್ಬಂದಿ ಹಾಗೂ ಅಳ್ನಾವರ ಮತ್ತು ಹಳಿಯಾಳ ಭಾಗದ ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.




