ಪ್ರಗತಿವಾಹಿನಿ ಸುದ್ದಿ, ಬೀದರ್ – ದಮನ್ ಪಾಟೀಲ ಎಂದು ಹೆಸರುವಾಸಿಯಾಗಿದ್ದ ಬೀದರ್ ಹಿರಿಯ ಪ್ರಸಿದ್ಧ ಪತ್ರಕರ್ತ ವಿಶ್ವನಾಥ ಬಾಬುರಾವ್ ಪಾಟೀಲ ಅವರು ಬೀದರ್ ನಲ್ಲಿ ಭಾನುವಾರ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ದೀರ್ಘಕಾಲ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು.
ದಿ ಹಿಂದೂ ಪತ್ರಿಕೆಯ ವರದಿಗಾರರಾಗಿದ್ದ ವಿಜಯಕುಮಾರ ಪಾಟೀಲ ಹಾಗೂ ರಂಗಕಲಾವಿದ ಮಹೇಶ ಪಾಟೀಲ ಸೇರಿ ಅವರಿಗೆ ಮೂವರು ಪುತ್ರರು. ಓರ್ವ ಪುತ್ರಿ ಗಾಯತ್ರಿದೇವಿ ಪಾಟೀಲ ಪಾಟ್ನಾದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದಮನ್ ಪಾಟೀಲರ ಪುತ್ರ ವಿಜಯಕುಮಾರ ಪಾಟೀಲ ರು ಹಿಂದೂ ಪತ್ರಿಕೆಯ ವರದಿಗಾರರಾಗಿ ಬೆಳಗಾವಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ವಿಶ್ವನಾಥ ಪಾಟೀಲರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
1970 ರಲ್ಲಿ ಹಿಂದಿಯಲ್ಲಿ ದಮನ್ ಪತ್ರಿಕೆ ಆರಂಭಿಸಿ, ಪ್ರಖರ ಬರವಣಿಗೆಯ ಮೂಲಕ ದಮನ್ ಪಾಟೀಲ ಎಂದು ಹೆಸರುವಾಸಿಯಾಗಿದ್ದರು. ಬೀದರ್, ಕಲಬುರಗಿ ಹಾಗೂ ವಿಜಯಪುರದಲ್ಲಿ ವಾರ್ತಾ ಇಲಾಖೆಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.
ಮೃತರ ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ 12 ಗಂಟೆಗೆ ಬೀದರ್ ನ ನರಸಿಂಹ ಝರನಾ ಮಂದಿರದ ಮಾರ್ಗದ ಸ್ಮಶಾನದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ