
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಪಟಾಕಿ ಅಂಗಡಿಯಲ್ಲಿ ಅಗ್ನಿ ದುರಂತ ಸಂಭವಿಸಿದ್ದು, 10 ಜನರು ಸಜೀವ ದಹನಗೊಂಡಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ನಡೆದಿದೆ.
ನವೀನ್ ಎಂಬುವವರಿಗೆ ಸೇರಿದ ಪಟಾಕಿ ಅಂಗಡಿಯಲ್ಲಿ ಈ ದುರಂತ ಸಂಭವಿಸಿದೆ. ಲಾರಿಯಿಂದ ಪಟಾಕಿ ಅನ್ ಲೋಡ್ ಮಾಡುತ್ತಿದ್ದಾಗ ಅಂಗಡಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಅಕ್ಕಪಕ್ಕದ 4-5 ಅಂಗಡಿಗಳಿಗೂ ಬೆಂಕಿ ಆವರಿಸಿದ್ದು, ಸುಟ್ಟು ಕರಕಲಾಗಿವೆ.
ಪಟಾಕಿ ಅಂಗಡಿ ಮುಂದೆ ನಿಂತಿದ್ದ ಬೈಕ್ ಗಳು ಬೆಂಕಿಗಾಹುತಿಯಾಗಿವೆ. ಬೆಂಕಿ ದುರಂತದಲ್ಲಿ 10 ಜನರು ಸಜೀವ ದಹನಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಹಲವರು ಗಾಯಗೊಂಡಿದ್ದಾರೆ.
ಇಂದು ಸಂಜೆ ಈ ದುರಂತ ಸಂಭವಿಸಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ. ದುರಂತದ ವೇಳೆ ಅಂಗಡಿಯಲ್ಲಿ 20 ಜನರು ಇದ್ದರು ನಾಲ್ಕರಿಂದ ಐದು ಜನರು ಮಾತ್ರ ಅಂಗಡಿಯಿಂದ ಹೊರ ಬಂದಿದ್ದಾರೆ 10 ಜನರು ಸಾವನ್ನಪ್ಪಿದ್ದಾರೆ. ಇನ್ನುಳಿದವರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ