Kannada NewsLatestWorld

*ಇರಾನ್ ಮೇಲೆ ಮತ್ತಷ್ಟು ಭೀಕರ ದಾಳಿ ನಡೆಸುವುದಾಗಿ ಗುಡುಗಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್*

ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಪೂರೈಕೆಗೆ ಭಾರಿ ಅಡಚಣೆ ಭೀತಿ: ತೀವ್ರ ಕಳವಳ ವ್ಯಕ್ತಪಡಿಸಿದ ಭಾರತ

Home add -Advt

ಪ್ರಗತಿವಾಹಿನಿ ಸುದ್ದಿ: ಅಮೆರಿಕ-ಇರಾನ್ ನಡುವೆ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ರಾತ್ರೋ ರಾತ್ರಿ ಭೀಕರ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಮುಂಜಾನೆಯಷ್ಟೇ ಇರಾನ್ ಮೇಲೆ ಪ್ರಬಲ ದಾಳಿ ನಡೆಸಿದ್ದ ಅಮೆರಿಕ ಇಂದು ರಾತ್ರಿಯೂ ಇರಾನ್ ಮೇಲೆ ಮತ್ತೊಂದು ಸುತ್ತಿನ ಭೀಕರ ದಾಳಿ ನಡೆಸಲಿದ್ದೇವೆ ಎಂದು ಎಚ್ಚರಿಕೆ ನೀಡಿದೆ.

ಈ ಯುದ್ಧದ ಪರಿಸ್ಥಿತಿಯಿಂದಾಗಿ ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಪೂರೈಕೆಗೆ ಭಾರಿ ಅಡಚಣೆಯಾಗುವ ಭೀತಿ ಎದುರಾಗಿದ್ದು, ಭಾರತ ಸರ್ಕಾರವು ತೀವ್ರ ಕಳವಳ ವ್ಯಕ್ತಪಡಿಸಿದೆ.

ಹಾಮರ್ಮಜ್ ಜಲಸಂಧಿಯಲ್ಲಿನ ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳಿಂದ ಜಾಗತಿಕ ಕಚ್ಚಾತೈಲ ಪೂರೈಕೆಗೆ ಭಾರಿ ಅಡಚಣೆಯಾಗುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ, ಭಾರತವು ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆ ಕಾಪಾಡಲು, ಯುದ್ಧ ನಿಲ್ಲಿಸಿ ಸಂಯಮ ಕಾಯ್ದುಕೊಂಡು ಸಂವಾದದ ಮೂಲಕ ಸಮಸ್ಯೆಯನ್ನು ಬಗೆಹರಿಸಲು ಉಭಯ ರಾಷ್ಟ್ರಗಳಿಗೆ ತುರ್ತು ಕರೆ ನೀಡಿದೆ.

ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಉದ್ವಿಗ್ನತೆಯ ಬಗ್ಗೆ ಭಾರತದ ವಿದೇಶಾಂಗ ಸಚಿವಾಲಯವು ಅಧಿಕೃತ ಪ್ರಕಟಣೆ ಹೊರಡಿಸಿದೆ. ಅಂತಾರಾಷ್ಟ್ರೀಯ ಜಲಮಾರ್ಗದಲ್ಲಿ ಮುಗ್ಧ ನಾಗರಿಕರ ಸರಕು ಹಡಗುಗಳನ್ನು ಗುರಿಯಾಗಿಸಿಕೊಂಡು ನಡೆಸುತ್ತಿರುವ ದಾಳಿಗಳು ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಸಂಪೂರ್ಣವಾಗಿ ಹಾಳುಮಾಡುತ್ತವೆ. ಉಭಯ ದೇಶಗಳು ತಕ್ಷಣವೇ ಯುದ್ಧದ ಹಠವನ್ನು ಬಿಟ್ಟು ಸಂಯಮ ಕಾಯ್ದುಕೊಳ್ಳಬೇಕು. ನಾಗರಿಕರ ರಕ್ಷಣೆ ಹಾಗೂ ಇಂಧನ ಸರಬರಾಜಿನ ನಿರಂತರ ಹರಿವನ್ನು ಖಚಿತಪಡಿಸಿಕೊಳ್ಳಲು ಸಂವಾದ ಮತ್ತು ರಾಜತಾಂತ್ರಿಕ ಹಾದಿಗೆ ಮರಳಬೇಕು ಎಂದು ಹೇಳಿದೆ.

ಟ್ರಂಪ್ ಗುಡುಗಿದ್ದು ಏಕೆ? ಟರ್ಕಿಯಲ್ಲಿ ನಡೆಯುತ್ತಿರುವ ನ್ಯಾಟೋ (NATO) ಮಿಲಿಟರಿ ಮೈತ್ರಿಕೂಟದ ಶೃಂಗಸಭೆಯಲ್ಲಿ ಅಸಾಮಾನ್ಯ ಆಕ್ರಮಣಕಾರಿ ಶೈಲಿಯಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಇರಾನ್ ನಾಯಕತ್ವವು ಹುಚ್ಚುಚ್ಚಾಗಿ ವರ್ತಿಸುತ್ತಿದೆ ಎಂದು ಕಿಡಿಕಾರಿದ್ದಾರೆ.

ನಾವು ನಿನ್ನೆ ರಾತ್ರಿ ಇರಾನ್ ಮೇಲೆ ತುಂಬಾ ಕಠಿಣ ದಾಳಿ ನಡೆಸಿದ್ದೇವೆ. ಅಗತ್ಯಬಿದ್ದರೆ ಇಂದು ರಾತ್ರಿಯೂ ಅವರ ಮೇಲೆ ಬಲವಾದ ವಾಯುದಾಳಿ ನಡೆಸುವ ಸಾಧ್ಯತೆ ಹೆಚ್ಚು. ಇರಾನ್ ಬಹಳ ದಿನಗಳಿಂದ ಮಧ್ಯಪ್ರಾಚ್ಯದ ರೌಡಿಯಂತೆ ವರ್ತಿಸುತ್ತಿತ್ತು. ಆದರೆ ಇನ್ಮುಂದೆ ಅವರ ಬೆದರಿಕೆಗಳು ನಡೆಯುವುದಿಲ್ಲ ಎಂದು ಟ್ರಂಪ್ ಸವಾಲು ಹಾಕಿದ್ದಾರೆ.

Related Articles

Back to top button