ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಎಐಸಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಕ್ಕೆ ಮೊದಲ ಬಾರಿಗೆ ಇದೇ 6 ರಂದು ಆಗಮಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ದೇಶದಲ್ಲಿ ಬೇರೆ ರಾಜ್ಯಗಳಿಗೆ ಪ್ರವಾಸ ಹೋಗುವ ಮುನ್ನ ನಮ್ಮ ರಾಜ್ಯಕ್ಕೆ ಆಗಮಿಸಬೇಕು ಎಂದು ಬಯಸಿದ್ದಾರೆ. ನಾವೆಲ್ಲ ನಾಯಕರು ಚರ್ಚೆ ಮಾಡಿ ನವೆಂಬರ್ 6 ರಂದು ರಾಜ್ಯಕ್ಕೆ ಆಗಮಿಸುವಂತೆ ಮನವಿ ಮಾಡಿದ್ದೇವೆ. ಅವರು 6 ರಂದು ಬೆಳಗ್ಗೆ 10.50 ಗಂಟೆಗೆ ಆಗಮಿಸುತ್ತಾರೆ. ನಂತರ ಮಧ್ಯಾಹ್ನ 2.35ಕ್ಕೆ ಅರಮನೆ ಮೈದಾನದಲ್ಲಿ ‘ಸರ್ವೋದಯ ಸಮಾವೇಶ’ ಹಮ್ಮಿಕೊಂಡಿದ್ದು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಾವಿರಾರು ಮಂದಿ ಕಾರ್ಯಕರ್ತರು, ನಾಯಕರು ಸ್ವಾಗತ ಮಾಡಲಿದ್ದಾರೆ ಎಂದರು.
ಖರ್ಗೆ ಅವರು 1972ರಲ್ಲಿ ವಿಧಾನಸಭೆಗೆ ಪ್ರವೇಶಿಸಿದ್ದು, 50 ವರ್ಷಗಳ ಸುದೀರ್ಘ ಸೇವೆ ಮಾಡಿದ್ದು, ಇಂತಹ ಹಿರಿಯ ನಾಯಕರು ನಮ್ಮ ರಾಜ್ಯದಿಂದ ಈ ಸ್ಥಾನಕ್ಕೆ ಆಯ್ಕೆ ಆಗಿರುವುದು ನಮ್ಮ ಹೆಮ್ಮೆ. ಹೀಗಾಗಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲು ಮುಂದಾಗಿದ್ದೇವೆ. ಪಕ್ಷ ಮಾತ್ರವಲ್ಲದೆ ಹಲವು ಸಂಘಟನೆಗಳು ಕೂಡ ಸ್ವಾಗತ ಕಾರ್ಯಕ್ರಮಕ್ಕೆ ಬೆಂಬಲ ನೀಡಿದ್ದಾರೆ. ಈ ಸರ್ವೋದಯ ಸಮಾವೇಶಕ್ಕೆ ಪ್ರತಿ ಗ್ರಾಮ ಪಂಚಾಯ್ತಿಯಿಂದ, ವಾರ್ಡ್ ಚುನಾವಣೆಯಲ್ಲಿ ಗೆದ್ದವರು, ಸೋತವರು ಎಲ್ಲರೂ ಆಗಮಿಸಬೇಕು. ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಕಿಸಾನ್ ಘಟಕ, ಅಲ್ಪ ಸಂಖ್ಯಾತರು, ಹಿಂದುಳಿದ ವರ್ಗದವರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಘಟಕ ಸೇರಿದಂತೆ ನಾನಾ ಘಟಕಗಳ ಮುಖಂಡರು ಈ ಕಾರ್ಯಕ್ರಮಕ್ಕೆ ಆಗಮಿಸಬೇಕು. ಖರ್ಗೆ ಅವರ ಮಾರ್ಗದರ್ಶನದ ಮಾತು, ಸಂದೇಶವನ್ನು ಹಳ್ಳಿ ಹಳ್ಳಿಗೆ ಕೊಂಡೊಯ್ಯಬೇಕು. ಜಿಲ್ಲಾ, ತಾಲೂಕು, ರಾಜ್ಯ ಮಟ್ಟದ ಕಾರ್ಯಕರ್ತರು ಮಾಧ್ಯಮಗಳಲ್ಲಿ ಜಾಹೀರಾತು ನೀಡಲು ನಾವು ಮುಕ್ತ ಅವಕಾಶ ನೀಡುತ್ತಿದ್ದೇವೆ ಎಂದು ಹೇಳಿದರು.
ಪಕ್ಷದ ಟಿಕೆಟ್ ಆಕಾಂಕ್ಷಿಗಳಿಗೆ ಅರ್ಜಿ ಆಹ್ವಾನ:
ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಗೆ ಸಜ್ಜಾಗುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಬಯಸಿರುವವರು ಅರ್ಜಿ ಹಾಕಲು ಅವಕಾಶ ಕಲ್ಪಿಸಲಾಗಿದೆ. ನವೆಂಬರ್ 5 ರಿಂದ 15 ರವರೆಗೆ ಅರ್ಜಿ ಹಾಕಬಹುದು. ಅರ್ಜಿಗೆ 5 ಸಾವಿರ ರು. ಶುಲ್ಕ. ಅರ್ಜಿ ಸಲ್ಲಿಸುವಾಗ ಸಾಮಾನ್ಯ ವರ್ಗದವರು 2 ಲಕ್ಷ ರು ಡಿಡಿ, ಕಾಂಗ್ರೆಸ್ ಸದಸ್ಯತ್ವ ವಿವರ ಲಗತ್ತಿಸಬೇಕು. ಪರಿಶಿಷ್ಟ ವರ್ಗದವರಿಗೆ ಶೇ. 50 ರಷ್ಟು ವಿನಾಯಿತಿ ನೀಡಲಾಗಿದೆ. ಈ ಹಣ ಪಕ್ಷದ ಕಟ್ಟಡ ಕಾಮಗಾರಿ ನಿಧಿಗೆ ಜಮೆ ಆಗಲಿದೆ ಎಂದರು.
2023 ರ ಚುನಾವಣೆಯಲ್ಲಿ ಹಾಲಿ ಶಾಸಕರ ಸಮೇತ ಟಿಕೆಟ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದು. ನಾನು ಕೂಡ ಚುನಾವಣೆಯಲ್ಲಿ ಸ್ಪರ್ಧಿಸಲು ಈ ಅರ್ಜಿ ಹಾಕಬೇಕು. ಇಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂದು ಹೇಳಿದರು.
ಮತ್ತೆ ಸದಸ್ಯತ್ವ ನೋಂದಣಿ ಆರಂಭ:
ಹಲವು ಮಂದಿ ಕಾಂಗ್ರೆಸ್ ಸದಸ್ಯತ್ವ ಪಡೆಯಲು ಉತ್ಸುಕರಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಆನ್ ಲೈನ್ ಮೂಲಕ ನೋಂದಣಿ ಆರಂಭಿಸಿದ್ದೇವೆ. ಕೆಲವು ನಾಯಕರು ಕಾಂಗ್ರೆಸ್ ಸೇರಲು ಬಯಸಿದ್ದು, ನನ್ನ ಸಂಪರ್ಕದಲ್ಲಿದ್ದಾರೆ. ಅವರ ಹೆಸರನ್ನು ಈಗ ಬಹಿರಂಗ ಪಡಿಸುವುದಿಲ್ಲ. ಕಾಂಗ್ರೆಸ್ ಪಕ್ಷದ ಸಿದ್ಧಾಂತ, ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ನಾಯಕತ್ವ ಒಪ್ಪಿ ಬೇಷರತ್ತಾಗಿ ಪಕ್ಷ ಸೇರಲು ಬಯಸುವವರು ಅರ್ಜಿ ಹಾಕಬಹುದು. ಅವರಿಗೆ ಮುಕ್ತ ಅವಕಾಶ ನೀಡಲಾಗಿದೆ. ಅರ್ಜಿ ಹಾಕಿದ ನಂತರ ಅಲ್ಲಂ ವೀರಭದ್ರಪ್ಪ ಅವರ ನೇತೃತ್ವದ ಸಮಿತಿ ಯಾರನ್ನು ಸೇರಿಸಿಕೊಳ್ಳಬೇಕು ಎಂದು ತೀರ್ಮಾನಿಸಲಿದೆ ಎಂದು ತಿಳಿಸಿದರು.
ಪ್ರಶ್ನೋತ್ತರ:
ಪಕ್ಷ ಬಿಟ್ಟು ಹೋದವರನ್ನು ಸೇರಿಸಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ, ‘ಈ ವಿಚಾರದಲ್ಲಿ ಮುಕ್ತ ಅವಕಾಶ ನೀಡಿದ್ದೇವೆ. ಅದಕ್ಕಾಗಿ ಒಂದು ಸಮಿತಿ ಇದೆ. ಪಕ್ಷದ ಸಿದ್ಧಾಂತ ಒಪ್ಪಿಕೊಳ್ಳುವ ಯಾರು ಬೇಕಾದರೂ ಅರ್ಜಿ ಹಾಕಬಹುದು. ನಾವು ಎಲ್ಲ ನಾಯಕರ ಜತೆ ಚರ್ಚೆ ಮಾಡಿ, ಪಕ್ಷದ ಅಧ್ಯಕ್ಷನಾಗಿ ಈ ವಿಚಾರ ತಿಳಿಸುತ್ತಿದ್ದೇನೆ. ಯಾರನ್ನು ಸೇರಿಸಿಕೊಳ್ಳಬೇಕು ಯಾರನ್ನು ಸೇರಿಸಿಕೊಳ್ಳಬಾರದು ಎಂಬ ನಿರ್ಧಾರವನ್ನು ಸಮಿತಿ ಕೈಗೊಳ್ಳಲಿದೆ’ ಎಂದರು.
ಪಕ್ಷದ ಟಿಕೆಟ್ ಗೆ ಹಣ ಯಾವ ಮಾನದಂಡದಲ್ಲಿ ನೀಡಬೇಕು ಎಂಬ ಪ್ರಶ್ನೆಗೆ, ‘ಯಾವುದೇ ಮಾನದಂಡವಿಲ್ಲ. ನಾವು ಪಕ್ಷದ ಕಟ್ಟಡ, ಪಕ್ಷದ ನಿಧಿ, ಚುನಾವಣಾ ಪ್ರಚಾರ, ಜಾಹೀರಾತು ನೀಡಲು ಹಣ ಬೇಕಿದೆ. ಪತ್ರಕರ್ತರಿಗೆ ಹಣ ನೀಡುವುದಿಲ್ಲ. ಮುಖಪುಟದ ಜಾಹೀರಾತು ನೀಡಲು ನಮ್ಮ ಬಳಿ ಸರ್ಕಾರ ಇಲ್ಲ. ಪಕ್ಷಕ್ಕೆ 20 ಸಾವಿರಕ್ಕಿಂತ ಹೆಚ್ಚಿನ ನಗದು ಪಡೆಯುವಂತಿಲ್ಲ. ನಮಗೆ ಯಾವುದೇ ಚುನಾವಣಾ ಬಾಂಡ್ ಬರುತ್ತಿಲ್ಲ. ಎಲ್ಲ ಬಿಜೆಪಿಗೆ ಹೋಗುತ್ತಿದೆ. ಹೀಗಾಗಿ ಕಾರ್ಯಕರ್ತರಾದರೂ ಪಕ್ಷಕ್ಕೆ ಹಣ ನೀಡಲಿ’ ಎಂದು ತಿಳಿಸಿದರು.
ಅರ್ಜಿ ಹಾಕಲು ವಯೋಮಿತಿ ಇದೆಯೇ ಎಂಬ ಪ್ರಶ್ನೆಗೆ, ‘ನಮ್ಮಲ್ಲಿ ವಯೋಮಿತಿ ಇಲ್ಲ. ನಮ್ಮಲ್ಲಿ ಮಾರ್ಗದರ್ಶಕ ಮಂಡಲಿ ಇಲ್ಲ. ನಾವು 92 ವರ್ಷದ ಶಾಮನೂರು ಶಿವಶಂಕರಪ್ಪ ಅವರನ್ನು ಇಟ್ಟುಕೊಂಡಿದ್ದೇವೆ. ಅವರು ಬೇರೆಯವರಿಗಿಂತ ಹೆಚ್ಚು ಓಡಾಡುತ್ತಿದ್ದಾರೆ. ಕ್ಷೇತ್ರದ ಎಲ್ಲ ಬೂತ್ ಗಳಿಗೂ ಭೇಟಿ ನೀಡುತ್ತಿದ್ದಾರೆ. ನಮ್ಮ ತಂದೆ ತಾಯಿಗಳನ್ನು ನಾವು ಮನೆಯಿಂದ ಆಚೆ ಹಾಕುವುದಿಲ್ಲ. ಅದಕ್ಕೆ ನಾನು ಅವಕಾಶ ನೀಡುವುದಿಲ್ಲ’ ಎಂದರು.
ಬಿಜೆಪಿಯವರು ಸಮುದಾಯಗಳ ಸಮಾವೇಶ ಮಾಡುತ್ತಿರುವ ಬಗ್ಗೆ ಕೇಳಿದಾಗ, ‘ಅವರಿಗೆ ಜಾತಿ ಇಲ್ಲ. ಹೀಗಾಗಿ ಜಾತಿಗಳ ಬೆಂಬಲ ಹುಡುಕಿಕೊಂಡು ಹೋಗುತ್ತಿದ್ದಾರೆ. ನಾವು ಸರ್ವೋದಯ ಸಮಾವೇಶ ಮಾಡುತ್ತಿದ್ದೇವೆ. ಗಾಂಧಿ ಅವರು ಆರಂಭಿಸಿದ ಸರ್ವೋದಯವನ್ನೇ ಮಲ್ಲಿಕಾರ್ಜುನ ಖರ್ಗೆ ಅವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ’ ಎಂದರು.
ಶ್ರೀರಾಮುಲು ಅವರ ಧರಣಿ ಬಗ್ಗೆ ಕೇಳಿದಾಗ, ‘ಸರ್ಕಾರ ಎಷ್ಟು ವೇಗವಾಗಿದೆ ಎಂಬುದಕ್ಕೆ ಶ್ರೀರಾಮುಲು ಅವರ ಧರಣಿ ಸಾಕ್ಷಿ. ಶ್ರೀರಾಮ ಮಲಗಿರುವುದು ರಾಮ ರಾಜ್ಯ ಏನಾಗುತ್ತಿದೆ ಎಂಬುದಕ್ಕೆ ಸಾಕ್ಷಿ’ ಎಂದರು.
7 ಲಕ್ಷ ಕೋಟಿ ಬಂಡವಾಳ ಹೂಡಿಕೆ: ಹೆಚ್ಚಿನ ಉದ್ಯೋಗಾವಕಾಶ ನೀಡುವ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ
https://pragati.taskdun.com/politics/invest-karnataka-2022cm-basavaraj-bommaibangalore/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ