Kannada NewsKarnataka NewsLatest

*ಡಯಾಗ್ನೋಸ್ಟಿಕ್ ಲ್ಯಾಬ್‌ ನಲ್ಲಿ ಮಹಿಳೆ ಜೊತೆ ಅನುಚಿತ ವರ್ತನೆ: ಜೀವ ಬೆದರಿಕೆ*

ಎಫ್ ಐ ಆರ್ ದಾಖಲು


ಪ್ರಗತಿವಾಹಿನಿ ಸುದ್ದಿ: ತಪಾಸಣೆಗೆ ಬಂದಿದ್ದ ಮಹಿಳೆಗೆ ಡಯಾಗ್ನೋಸ್ಟಿಕ್ ಲ್ಯಾಬ್‌ವೊಂದರಲ್ಲಿ ಅನುಚಿತವಾಗಿ ವರ್ತಿಸಿ, ಬಳಿಕ ಜೀವಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಬೆಂಗಳೂರಿನ ಬ್ಯಾಡರಹಳ್ಳಿ ವ್ಯಾಪ್ತಿಯ ಖಾಸಗಿ ಡಯಾಗ್ನೋಸ್ಟಿಕ್ ಲ್ಯಾಬ್‌ ನಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಲ್ಯಾಬ್ ಮ್ಯಾನೇಜರ್ ಪ್ರಭಾಕರ್ ಹಾಗೂ ಸಿಬ್ಬಂದಿ ಪ್ರದೀಪ್ ಎಂಬುವವರ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಯೊಬ್ಬರು ಥೈರಾಯ್ಡ್ ತಪಾಸಣೆಗಾಗಿ ಬ್ಯಾಡರಹಳ್ಳಿಯ ಪ್ರಕಾಶ್ ಡಯಾಗ್ನೋಸ್ಟಿಕ್ ಲ್ಯಾಬೋರೇಟರಿಗೆ ತೆರಳಿದ್ದರು. ಈ ವೇಳೆ ರಕ್ತದ ಮಾದರಿ ಸಂಗ್ರಹಿಸುವ ಸಂದರ್ಭದಲ್ಲಿ ಲ್ಯಾಬ್ ತಂತ್ರಜ್ಞ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸಿದ್ದಾನೆ ಎಂದು ಆಕೆ ಆರೋಪಿಸಿದ್ದಾರೆ. ರಕ್ತ ತೆಗೆಯುವಾಗ ನೋವಾಗುತ್ತಿದೆ ಎಂದು ಮಹಿಳೆ ಕಿರುಚಿಕೊಂಡರೂ ನಿರ್ಲಕ್ಷ್ಯ ವಹಿಸಿ ಬಲವಂತವಾಗಿ ರಕ್ತ ತೆಗೆಯಲಾಗಿದೆ. ಇದರ ಪರಿಣಾಮವಾಗಿ ಮಹಿಳೆಯ ಕೈನಲ್ಲಿ ರಕ್ತ ಹೆಪ್ಪುಗಟ್ಟಿ, ತೀವ್ರ ಸ್ವರೂಪದ ಊತ ಕಾಣಿಸಿಕೊಂಡಿದೆ. ಈ ಬಗ್ಗೆ ಅದೇ ಲ್ಯಾಬ್ ತಂತ್ರಜ್ಞರ ಬಳಿ ಕೇಳಿದಾಗ ಐಸ್ ಪ್ಯಾಕ್ ಇಟ್ಟುಕೊಳ್ಳುವಂತೆ ತಿಳಿಸಿದ್ದರು. ಇದು ಹೆಮಟೋಮಾ ಆದ್ದರಿಂದ ಬೇರೆ ವೈದ್ಯರ ಬಳಿ ಟೆಸ್ಟ್ ಮಾಡಿಸಿಕೊಳ್ಳಿ ಎಂದೂ ಹೇಳಿದ್ದರು ಎಂದು ಮಹಿಳೆ ಎಫ್​ಐಆರ್​ನಲ್ಲಿ ತಿಳಿಸಿದ್ದಾರೆ.

ಇದಾದ 2-3 ದಿನಗಳ ನಂತರ ನೋವು ಮತ್ತು ಊತ ಹೆಚ್ಚಾಗಿದ್ದು, ಲ್ಯಾಬ್​ನವರಿಗೆ ತಿಳಿಸಿದಾಗ ಅವರು ಆಕೆಯ ಮನೆಗೆ ಬಂದು, ಮಾತನಾಡಿ ಬಗೆಹರಿಸಿಕೊಳ್ಳೋಣವೆಂದು ಹೇಳಿದ್ದರು ಎಂದು ಮಹಿಳೆ ತಿಳಿಸಿದ್ದಾರೆ. ಆದರೆ ಆಕೆಯ ಮನೆಯಿಂದ ಹೊರಡುವ ಸಮಯದಲ್ಲಿ ಈ ವಿಷಯವನ್ನು ಹೊರಗೆ ತಿಳಿಸಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಜೀವಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಹಿಳೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿರುವ ಪೊಲೀಸರಿಗೆ ಮೇಲ್ನೋಟಕ್ಕೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಎಫ್ ಐ ಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button