Kannada NewsLatestNational

ಮಹಿಳೆಯರ ಎಲ್ಲ ಆತ್ಮಹತ್ಯೆ ಪ್ರಕರಣಗಳಿಗೂ ವರದಕ್ಷಿಣೆಯೇ ಕಾರಣ ಎನ್ನಲಾಗದು: ಹೈಕೋರ್ಟ್

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಿದ್ದು ಬಹುತೇಕ ಪ್ರಕರಣಗಳಲ್ಲಿ ವರದಕ್ಷಿಣೆ ಕಿರುಕುಳ ಕಾರಣಗಳನ್ನು ನೀಡಲಾಗುತ್ತದೆ. ಆದರೆ ಪುರುಷನ ವಿವಾಹೇತರ ಸಂಬಂಧ, ಬೆಟ್ಟಿಂಗ್ ಮತ್ತಿತರ ಚಟಗಳಿಗೆ ಬೇಸತ್ತು ಪತ್ನಿ ಆತ್ಮಹತ್ಯೆ ಮಾಡಿಕೊಂಡರೆ ಅದನ್ನು ವರದಕ್ಷಿಣೆ ಕಿರುಕುಳ ಎನ್ನಲಾಗದು ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.

ಐಪಿಸಿ ಕಲಂ 304 ಬಿ ಪ್ರಕಾರ ಪತಿ ವಿರುದ್ಧ ಪ್ರಕರಣ ದಾಖಲಿಸುವ ಮೊದಲು ಮಹಿಳೆಯ ಸಾವಿಗೆ ಸ್ವಲ್ಪವೇ ಮೊದಲು ಆಕೆಯ ಪತಿ ಅಥವಾ ಆತನ ಮನೆಯವರು ಕಿರುಕುಳ ನೀಡಿರಬೇಕು. ಅದು ವರದಕ್ಷಿಣೆಗೆ ಸಂಬಂಧಪಟ್ಟಿರಬೇಕು. ಇಲ್ಲವಾದಲ್ಲಿ ಅದನ್ನು ವರದಕ್ಷಿಣೆ ಕಿರುಕುಳ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ವಿಕಾಸ ಮಹಾಜನ ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನು, “ಸಾವಿಗೆ (ಸ್ವಲ್ಪ ಸಮಯ) ಮುಂಚೆ” ಕಿರುಕುಳ ಎಂಬುದು ಸಾಪೇಕ್ಷ ಅಭಿವ್ಯಕ್ತಿಯಾಗಿದೆ. ಸಮಯದ ವಿಳಂಬವು ಪ್ರಕರಣದಿಂದ ಪ್ರಕರಣಕ್ಕೆ ಭಿನ್ನವಾಗಿರಬಹುದು. ವರದಕ್ಷಿಣೆ ಬೇಡಿಕೆ ಹಳೆಯದಾಗಿರಬಾರದು. ಆದರೆ ಐಪಿಸಿ ಸೆಕ್ಷನ್‌ 304B ಅಡಿಯಲ್ಲಿ ವಿವಾಹಿತ ಮಹಿಳೆಯ ಸಾವಿಗೆ ಕಿರುಕುಳ ನಿರಂತರ ಕಾರಣವಾಗಿರಬೇಕು’’ ಎಂದು ಹೈಕೋರ್ಟ್‌ ಹೇಳಿದೆ.

ಪ್ರಕರಣವೊಂದರಲ್ಲಿ ತಾನು ಕಾನೂನು ಪದವೀಧರನಾಗಿದ್ದು, ವಕೀಲ ವೃತ್ತಿ ನಡೆಸುತ್ತಿರುವುದಾಗಿ ಹೇಳಿದ ವ್ಯಕ್ತಿಯೊಬ್ಬ ಆಕೆಯೊಂದಿಗೆ ವಿವಾಹವಾಗಿದ್ದ. ನಂತರದಲ್ಲಿ ಆತನ ವಿವಾಹೇತರ ಸಂಬಂಧ ಮತ್ತು ಬೆಟ್ಟಿಂಗ್ ಅಭ್ಯಾಸಗಳು ಪತಿ ಹಾಗೂ ಪತ್ನಿ ಮಧ್ಯೆ ವಿರಸಕ್ಕೆ ಕಾರಣವಾಗಿತ್ತು. ಪತ್ನಿ ಪತಿಯ ವಿರುದ್ಧ ಹಲವು ಪ್ರಕರಣಗಳನ್ನು ದಾಖಲಿಸಿದ್ದಲ್ಲದೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಳು. 2021ರ ಏಪ್ರಿಲ್ 19 ರಿಂದ ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಏತನ್ಮಧ್ಯೆ ಮಹಿಳೆ 2022ರ ಆಗಸ್ಟ್ 7 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ, ಸಂತ್ರಸ್ತೆ ತನ್ನ ಪತಿಯ ಮನೆಯಿಂದ ಹೊರಬಿದ್ದ ಮೇಲೆ ಆರೋಪಿಯು ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದ ಎಂಬುದನ್ನು ಸಾಬೀತುಪಡಿಸಲು ಯಾವುದೇ ದಾಖಲೆಗಳಿಲ್ಲ ಎಂಬ ಪ್ರಾಸಿಕ್ಯೂಷನ್ ವಾದದ ಬಳಿಕ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಹೈಕೋರ್ಟ್ ಅನುಮತಿ ನೀಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button