Latest

ಕೋವಿಡ್ ಪ್ಯಾಕೇಜ್ ಜತೆಗೆ ಇತರ ಬಾಕಿ ಹಣವನ್ನೂ ಕೇಂದ್ರದಿಂದ ಕೇಳಿ ಪಡೆಯಬೇಕು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ’ಕೋವಿಡ್ ಪ್ಯಾಕೇಜ್’ ಜೊತೆಗೆ ಜಿಎಸ್ ಟಿ ಬಾಕಿ, ನೆರೆ-ಬರ ಪರಿಹಾರ ಸೇರಿದಂತೆ ಕೇಂದ್ರದಿಂದ ಬರಬೇಕಾದ ಇತರ ಬಾಕಿ ಹಣದ ಬಗ್ಗೆಯೂ ಬಿಎಸ್‌ ಯಡಿಯೂರಪ್ಪ, ಪ್ರಧಾನಿ ಮೋದಿ ಜೊತೆಗಿನ ಸಭೆಯಲ್ಲಿ ಕೇಳಬೇಕು ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಇಂದು ಪ್ರಧಾನಿ ನರೇಂದ್ರ ಮೋದಿ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಸಿಎಂ ಬಿ.ಎಸ್.‌ ಯಡಿಯೂರಪ್ಪ, ರಾಜ್ಯಕ್ಕೆ ನ್ಯಾಯಯುತವಾಗಿ ಸಿಗಬೇಕಾದ ಕೋವಿಡ್‌ ಪ್ಯಾಕೇಜ್, ಜಿಎಸ್‌ಟಿ ಬಾಕಿ ಮತ್ತು ನೆರೆ-ಬರ ಪರಿಹಾರವನ್ನು ಕೇಳಿ ಪಡೆಯಬೇಕು ಎಂದು ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡುವ ಮೂಲಕ ಆಗ್ರಹಿಸಿರುವ ಕುಮಾರಸ್ವಾಮಿ,ಲಾಕ್ ಡೌನ್ ನಿಂದಾಗಿ ರಾಜ್ಯ ಹಣಕಾಸಿನ ತೊಂದರೆ ಅನುಭವಿಸುತ್ತಿದೆ. ಈ ಹೊತ್ತಲ್ಲಿ ಕೇಂದ್ರದಿಂದ ಸೂಕ್ತ ನೆರವು ಬಾರದ ಹೊರತು ಕೋವಿಡ್ ನಿಯಂತ್ರಣ ಕಷ್ಟವಾಗಲಿದೆ.

ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಕೇಂದ್ರ ಸರ್ಕಾರ #PMCaresFund ನಿಧಿ ಸ್ಥಾಪಿಸಿದೆ. ಇದಕ್ಕೆ ಸಂಸದರಾದಿಯಾಗಿ, ಉದ್ಯಮಿಗಳು, ನಾಗರಿಕರು ಉದಾರ ದೇಣಿಗೆ ನೀಡಿದ್ದಾರೆ. ಹೀಗಿದ್ದೂ ಕೇಂದ್ರದಿಂದ ರಾಜ್ಯಕ್ಕೆ ಈ ವರೆಗೆ ಕೋವಿಡ್ ಎದುರಿಸಲು ಸೂಕ್ತ ಆರ್ಥಿಕ ನೆರವು ಬಂದಿಲ್ಲ ಎಂಬುದನ್ನು ಮೋದಿ ಅವರಿಗೆ ಬಿಎಸ್‌ವೈ ಮನನ ಮಾಡಿಕೊಡಬೇಕು‌.

ಕಳೆದ 3 ದಿನಗಳ ಅಂಕಿಅಂಶ ಗಮನಿಸಿದರೆ ರಾಜ್ಯದಲ್ಲಿ ಕೋವಿಡ್ ಹೆಚ್ಚುತ್ತಿರುವಂತೆ ಕಾಣುತ್ತಿದೆ. ಹೀಗಾಗಿ ವೈದ್ಯಕೀಯ ಕ್ರಮಗಳನ್ನು ಬಿಗಿಗೊಳಿಸಬೇಕಿದೆ. ಜೊತೆಗೆ ನಷ್ಟಕ್ಕೊಳಗಾಗಿರುವ ಜನರಿಗೆ ಆರ್ಥಿಕ ಪರಿಹಾರ ನೀಡಬೇಕಿದೆ. ದೊಡ್ಡ ಮಟ್ಟದ ತೆರಿಗೆ ಸಂಗ್ರಹಿಸಿ ಕೇಂದ್ರಕ್ಕೆ ಕೊಡುವ ಕರ್ನಾಟಕದಂತಹ ದೊಡ್ಡ ರಾಜ್ಯಕ್ಕೆ ಸೂಕ್ತ ಪ್ಯಾಕೇಜ್ ಅತ್ಯಗತ್ಯ ಎಂದು ಒತ್ತಾಯಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button