ಪ್ರಗತಿವಾಹಿನಿ ಸುದ್ದಿ, ಚೆನ್ನೈ: “ಹಿಮದಲ್ಲಿ ಡ್ಯಾನ್ಸ್ ಶೂಟಿಂಗ್ ಮಾಡುವಾಗ ಹೀರೋಗಳಿಗೆ ಕೋಟು, ಜ್ಯಾಕೆಟ್ ಧರಿಸಲು ಅವಕಾಶ ನೀಡಲಾಗುತ್ತದೆ. ಆದರೆ ನಾವು ಮಾತ್ರ ಚಳಿಯಲ್ಲಿ ಬರಿ ಸೀರೆ, ಕುಪ್ಪಸ ತೊಡಬೇಕು..”
ಹೀಗೆ ಅಸಮಾಧಾನ ವ್ಯಕ್ತಪಡಿಸಿದ್ದು ನಟಿ ಶೃತಿ ಹಾಸನ್. ಹಿಮದಲ್ಲಿ ಹಾಡೊಂದರ ಚಿತ್ರೀಕರಣದ ವೇಳೆ ನಟಿಯರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬುದರ ಬಗ್ಗೆ ಶೃತಿ ಹಾಸನ್ ತಮ್ಮ ಅಭಿಮಾನಿಗಳೊಂದಿಗಿನ ಸಂದರ್ಶನವೊಂದರಲ್ಲಿ ತೆರೆದಿಟ್ಟಿದ್ದಾರೆ.
“ಹೀರೋ ಜಾಕೆಟ್ ಧರಿಸಬಹುದು. ನಟಿಯರಿಗೆ ಕೊನೆ ಪಕ್ಷ ಒಂದು ಶಾಲು ಧರಿಸಲಿಕ್ಕೂ ಅವಕಾಶವಿಲ್ಲ… ಹಿಮದಲ್ಲಿ ಕುಪ್ಪಸ ಮತ್ತು ಸೀರೆ ಧರಿಸಬೇಕು, ಇದು ನಿಜವಾಗಿಯೂ ಕಷ್ಟ … ನನಗಂತೂ ಹಿಮದಲ್ಲಿ ಶೂಟಿಂಗ್ ಮಾಡಲು ಮನಸ್ಸಿಲ್ಲ..” ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಹಿಮದಿಂದ ಆವೃತವಾದ ಪರ್ವತದ ಹಿನ್ನೆಲೆಯಲ್ಲಿ ಚಿತ್ರೀಕರಿಸಲಾದ ಚಿರಂಜೀವಿ ಜೊತೆ ಹಾಡಿನ ಕ್ಲಿಪ್‌ನೊಂದಿಗಿನ ವೀಡಿಯೊ ವನ್ನು Instagram ನಲ್ಲಿ ಹಂಚಿಕೊಂಡಿರುವ ಅವರು, ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಮುಂಬರುವ ತೆಲುಗು ಆಕ್ಷನ್-ಥ್ರಿಲ್ಲರ್ ಸಲಾರ್ ಚಿತ್ರಕ್ಕಾಗಿ ಇಂಥ ಚಿತ್ರೀಕರಣವನ್ನು ಪೂರ್ಣಗೊಳಿಸಿರುವುದಾಗಿ ತಿಳಿಸಿದ್ದಾರೆ.
ಅದರಲ್ಲಿ ಶ್ರುತಿ ಬಿಳಿ ಮತ್ತು ನೀಲಿ ಸೀರೆ ಮತ್ತು ತೋಳಿಲ್ಲದ ರವಿಕೆಯಲ್ಲಿ ಕಾಣಿಸಿಕೊಂಡರೆ, ಚಿರಂಜೀವಿ ಟೀ ಶರ್ಟ್, ಡೆನಿಮ್ಸ್, ಬ್ಲೇಜರ್ ಮತ್ತು ಶೂಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಂಥ ದೃಶ್ಯಗಳನ್ನು ಚಿತ್ರೀಕರಿಸದಂತೆ ಶೃತಿ ಹಾಸನ್ ಮನವಿ ಮಾಡಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ