Kannada NewsKarnataka NewsLatest

*ಕೆಆರ್​ಐಡಿಎಲ್ ಇಂಜಿನಿಯರ್ ನಾಪತ್ತೆ ಪ್ರಕರಣ*: *ಭೂಪಾಲ್‌ನಲ್ಲಿ ಪರ್ವೀಜ್ ಪ್ರತ್ಯಕ್ಷ*!

ಪ್ರಗತಿವಾಹಿನಿ ಸುದ್ದಿ: ಕಳೆದ 18 ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಗದಗ ಕೆಆರ್‌ಐಡಿಎಲ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪರ್ವೀಜ್ ಅವರ ಪತ್ತೆ ಕಾರ್ಯಕ್ಕೆ ಮಹತ್ವದ ಸುಳಿವು ಸಿಕ್ಕಿದೆ. ಮೊಬೈಲ್ ಸಂಪರ್ಕ ಸಂಪೂರ್ಣ ಸ್ಥಗಿತಗೊಳಿಸಿದ್ದರೂ ಪೊಲೀಸರು ಸಿಸಿಟಿವಿ ಜಾಡು ಹಿಡಿದು ಪರ್ವೀಜ್ ಅವರ ಪ್ರಯಾಣದ ಹಾದಿಯನ್ನು ಪತ್ತೆಹಚ್ಚಿದ್ದಾರೆ.

ಆರಂಭಿಕ ತನಿಖೆಯಲ್ಲಿ ಪರ್ವೀಜ್ ಅವರ ಕೊನೆಯ ಮೊಬೈಲ್ ನೆಟ್‌ವರ್ಕ್ ಲೋಕೇಷನ್ ಆಂಧ್ರಪ್ರದೇಶದ ವಿಜಯವಾಡದಲ್ಲಿ ಪತ್ತೆಯಾಗಿತ್ತು. ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ನೇರವಾಗಿ ಪತ್ತೆಹಚ್ಚುವುದು ಪೊಲೀಸರಿಗೆ ಸವಾಲಾಗಿತ್ತು. ನಿರಂತರ ಸಿಸಿಟಿವಿ ಪರಿಶೀಲನೆ ನಡೆಸಿದ ಪೊಲೀಸರು ಇದೀಗ ಮಧ್ಯಪ್ರದೇಶದ ಭೂಪಾಲ್ ರೈಲು ನಿಲ್ದಾಣದಲ್ಲಿ ಪರ್ವೀಜ್ ಕಾಣಿಸಿಕೊಂಡಿರುವುದನ್ನು ಪತ್ತೆಹಚ್ಚಿದ್ದಾರೆ.

ವಿಜಯವಾಡದಿಂದ ಪರ್ವೀಜ್ ಮುಂದಿನ ಪ್ರಯಾಣ ಕೈಗೊಂಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಸುಮಾರು 1,200 ಕಿಲೋಮೀಟರ್ ವ್ಯಾಪ್ತಿಯಲ್ಲಿನ ವಿವಿಧ ಸಿಸಿಟಿವಿ ಕ್ಯಾಮರಾಗಳ ದೃಶ್ಯಗಳನ್ನು ಪರಿಶೀಲಿಸಿದ ಬಳಿಕ ಪೊಲೀಸರು ಈ ಸುಳಿವು ಕಂಡುಕೊಂಡಿದ್ದಾರೆ.

ಭೂಪಾಲ್ ರೈಲು ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪರ್ವೀಜ್ ಸಂಚರಿಸುತ್ತಿರುವ ದೃಶ್ಯಗಳು ಲಭ್ಯವಾಗಿವೆ. ಮೊಬೈಲ್ ಸಂಪರ್ಕ ಇಲ್ಲದ ಕಾರಣ ಸಿಸಿಟಿವಿ ದೃಶ್ಯಗಳೇ ಪತ್ತೆ ಕಾರ್ಯಕ್ಕೆ ಪ್ರಮುಖ ಆಧಾರವಾಗಿವೆ.

ಪರ್ವೀಜ್ ತಮ್ಮ ಜಾಡು ಪತ್ತೆಯಾಗದಂತೆ ವಿಜಯವಾಡದಿಂದಲೇ ಮೊಬೈಲ್ ಫೋನ್ ಸಂಪೂರ್ಣವಾಗಿ ಸ್ವಿಚ್ ಆಫ್ ಮಾಡಿಕೊಂಡಿದ್ದರು ಎಂದು ಆರಂಭಿಕ ತನಿಖೆಯಲ್ಲಿ ತಿಳಿದುಬಂದಿದೆ. ಕಳೆದ 18 ದಿನಗಳಿಂದ ಮೊಬೈಲ್ ಆನ್ ಆಗದ ಹಿನ್ನೆಲೆಯಲ್ಲಿ ಪೊಲೀಸರು ಪರ್ಯಾಯ ಮಾರ್ಗಗಳ ಮೂಲಕ ಶೋಧ ನಡೆಸುತ್ತಿದ್ದಾರೆ.

ಪರ್ವೀಜ್ ಅವರ ಪ್ರಯಾಣದ ಮಾರ್ಗವನ್ನು ಪತ್ತೆಹಚ್ಚಲು ಗದಗ ಪೊಲೀಸರು ವಿವಿಧ ಪ್ರದೇಶಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಈ ಮೂಲಕ ವಿಜಯವಾಡದಿಂದ ಭೂಪಾಲ್‌ವರೆಗೆ ಪರ್ವೀಜ್ ತೆರಳಿರುವ ಸಾಧ್ಯತೆಯ ಜಾಡು ಸಿಕ್ಕಿದೆ.

ಸದ್ಯ ಗದಗ ಪೊಲೀಸ್ ತಂಡ ಭೂಪಾಲ್‌ನಲ್ಲಿ ಪರ್ವೀಜ್ ಅವರ ಚಲನವಲನದ ಮೇಲೆ ನಿಗಾ ಇರಿಸಿದೆ. ರೈಲು ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಗಳನ್ನು ಮತ್ತಷ್ಟು ಪರಿಶೀಲಿಸಲಾಗುತ್ತಿದೆ.

ಪರ್ವೀಜ್ ಸುರಕ್ಷಿತವಾಗಿದ್ದಾರೆಯೇ, ಯಾವ ಕಾರಣಕ್ಕೆ ನಾಪತ್ತೆಯಾಗಿದ್ದಾರೆ ಮತ್ತು ಮುಂದಿನ ಪ್ರಯಾಣದ ಉದ್ದೇಶವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಶೀಘ್ರದಲ್ಲೇ ಪರ್ವೀಜ್ ಅವರನ್ನು ಪತ್ತೆಹಚ್ಚುವ ನಿರೀಕ್ಷೆಯಲ್ಲಿ ಪೊಲೀಸ್ ತಂಡ ಕಾರ್ಯಾಚರಣೆ ಮುಂದುವರಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button