Belagavi NewsBelgaum NewsKannada NewsKarnataka NewsLatestPolitics

*ಅಂಗನವಾಡಿಯಲ್ಲಿ ಮಕ್ಕಳ ಆರೋಗ್ಯ, ಶಿಕ್ಷಣಕ್ಕೆ ಪರಮೋಚ್ಛ ಗಮನ ನೀಡಿ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕರೆ* *ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಆದೇಶ ಪತ್ರ ವಿತರಿಸಿದ ಸಚಿವರು*

ಪ್ರಗತಿವಾಹಿನಿ ಸುದ್ದಿ: ಪಾಲಕರು ವಿಶ್ವಾಸ ಮತ್ತು ಹಲವಾರು ಕನಸುಗಳೊಂದಿಗೆ ತಮ್ಮ ಮಗುವನ್ನು ಅಂಗನವಾಡಿಗೆ ಕಳುಹಿಸುತ್ತಾರೆ. ಹಾಗಾಗಿ ಅಂಗನವಾಡಿಯಲ್ಲಿ ಮಕ್ಕಳ ಆರೋಗ್ಯ ಮತ್ತು ಶಿಕ್ಷಣದ ಕಡೆ ಪರಮೋಚ್ಛ ಗಮನ ನೀಡುವ ಮೂಲಕ ಮಗುವಿನ ಸರ್ವಾಂಗೀಣ ವಿಕಾಸವಾಗುವಂತೆ ಮಾಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕರೆ ನೀಡಿದ್ದಾರೆ.

ಬೆಳಗಾವಿ ಗೃಹ ಕಚೇರಿಯಲ್ಲಿ ಬುಧವಾರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ನೇಮಕಾತಿ ಆದೇಶ ಪ್ರತಿಗಳನ್ನು ವಿತರಿಸಿ ಅವರು ಮಾತನಾಡಿದರು. ಒಟ್ಟು 2 ಕಾರ್ಯಕರ್ತೆಯರ ಹಾಗೂ 20 ಸಹಾಯಕಿಯರ ಹುದ್ದೆಗಳಿಗೆ ಈ ಸಂದರ್ಭದಲ್ಲಿ ನೇಮಕಾತಿ ಆದೇಶ ಪ್ರತಿಗಳನ್ನು ಹಸ್ತಾಂತರಿಸಿದ ಸಚಿವರು, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ನಿಯಮಕ್ಕಿಂತ ಹೆಚ್ಚಿನ ಶಿಕ್ಷಣ ಹೊಂದಿದವರು ನೇಮಕವಾಗುತ್ತಿದ್ದಾರೆ. ಸರಕಾರಿ ಅಂಗನವಾಡಿಗಳು ಇಂದು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಬದಲಾಗುತ್ತಿದೆ. ಮಕ್ಕಳಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಹಾಗಾಗಿ ಸಿಬ್ಬಂದಿ ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಅಂಗನವಾಡಿಗಳಲ್ಲಿ ಸ್ವಚ್ಛತೆಗೆ ಆದ್ಯತ ನೀಡಬೇಕು. ಮಕ್ಕಳನ್ನು ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಬೇಕು. ನಲಿಯುತ್ತ ಕಲಿಯುವಂತೆ ಮಾಡಬೇಕು. ಮಕ್ಕಳಿಗೆ ಯಾವುದೇ ರೀತಿಯಲ್ಲಿ ಶಿಕ್ಷೆ ನೀಡಬಾರದು. ಪಾಲಕರಿಗೆ ತಮ್ಮ ಮಗು ಅಂಗನವಾಡಿಯಲ್ಲಿ ಸುರಕ್ಷಿತ ಎನ್ನುವ ಭಾವನೆ ಮೂಡುವಂತೆ ನೋಡಿಕೊಳ್ಳಬೇಕು ಎಂದು ಸಚಿವರು ತಿಳಿಸಿದರು.

ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಚೇತನಕುಮಾರ್, ಬೆಳಗಾವಿ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಮಿತ್ರಾ, ತಾಲೂಕಾ ಪಂಚಾಯತ್ ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ ಉಪಸ್ಥಿತರಿದ್ದರು.

Home add -Advt

Related Articles

Back to top button