
ಪ್ರಗತಿವಾಹಿನಿ ಸುದ್ದಿ; ಮಂಗಳೂರು: ರಾಜ್ಯದಲ್ಲಿ ಇಂದು ಸಂಡೇ ಸಂಪೂರ್ಣ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕರ್ನಾಟಕ ಸ್ತಬ್ಧವಾಗಿದೆ. ಆದರೆ ಕೋವಿಡ್ ನಿಯಮ ಉಲ್ಲಂಘಿಸಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದಲ್ಲಿ ಭರ್ಜರಿ ಮದುವೆ ಪಾರ್ಟಿ ಮಾಡಲಾಗಿದೆ.
ಅಮ್ಮುಂಜೆ ಗ್ರಾಮದಲ್ಲಿ ಡಿಜೆ ಹಾಕಿಕೊಂಡು ಹಲವರು ಸಾಮೂಹಿಕ ಡ್ಯಾನ್ಸ್ ಮಾಡಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಜನರು ಮೆಹಂದಿ ಪಾರ್ಟಿಯಲ್ಲಿ ಭಾಗಿಯಾಗಿದ್ದು, ಪಾರ್ಟಿಯಲ್ಲಿ ಮಾಸ್ಕ್ ಕೂಡ ಹಾಕದೇ ಯುವಕರು ಕುಣಿದು ಕುಪ್ಪಳಿಸಿದ್ದಾರೆ. ಅಲ್ಲದೇ ಸಾಮಾಜಿಕ ಅಂತರ ಉಲ್ಲಂಘಿಸಿ ಯುವಕರು ಡ್ಯಾನ್ಸ್ ಮಾಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಕೊರೊನಾ ಸಂದರ್ಭದಲ್ಲಿ 50ಕ್ಕಿಂತ ಅಧಿಕ ಜನರು ಮದುವೆ, ಸಮಾರಂಭದಲ್ಲಿ ಭಾಗಿಯಾಗಬಾರದು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಮೆಹಂದಿ ಶಾಸ್ತ್ರದಲ್ಲಿ ನೂರಾರು ಜನರು ಸೇರಿ ಪಾರ್ಟಿ ಮಾಡಿ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸ್ಥಳೀಯ ಪೊಲೀಸರಿಗೆ ಎಸ್ಪಿ ಸೂಚನೆ ಕೊಟ್ಟಿದ್ದಾರೆ.
ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಈ ರೀತಿಯ ಮದುವೆ ಪಾರ್ಟಿ ನಡೆಸುವ ಅಗತ್ಯವೇನಿತ್ತುಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.