*ಅಪರೂಪದ ಕಾರ್ಯಕ್ರಮ: ಮಾದರಿ ಗಣೇಶ ಮಂಡಳಿಗಳಿಗೆ ಸನ್ಮಾನ*

ಪ್ರಗತಿವಾಹಿನಿ ಸುದ್ದಿ: ಯಮಕನಮರಡಿ: ಯಮಕನಮರಡಿ ಪೊಲೀಸ್ ಠಾಣಾ ಆವರಣದಲ್ಲಿ ಪಿಐ ಜಾವೀದ್ ಮುಶಾಪುರೆ ಅವರ ಅಧ್ಯಕ್ಷತೆಯಲ್ಲಿ ಮುಂಬರುವ ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಮಹತ್ವದ ಪೂರ್ವಭಾವಿ ಶಾಂತಿ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಠಾಣಾ ವ್ಯಾಪ್ತಿಯ ವಿವಿಧ ಸಾರ್ವಜನಿಕ ಗಣೇಶ ಮಂಡಳಿಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪ್ರಮುಖ ಗ್ರಾಮ ಮುಖಂಡರು ಹಾಜರಿದ್ದು ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಶಾಂತಿ, ಸೌಹಾರ್ದತೆ ಮತ್ತು ನಿಯಮ ಪಾಲನೆಗೆ ಕಟ್ಟುನಿಟ್ಟಿನ ಕರೆ:
ಸಭೆಯನ್ನುದ್ದೇಶಿಸಿ ಮಾತನಾಡಿದ ಪಿಐ ಜಾವೀದ್ ಮುಶಾಪುರೆ ರವರು “ಗಣೇಶೋತ್ಸವವು ಭಕ್ತಿ, ಭಾವೈಕ್ಯತೆ ಹಾಗೂ ಸಂಭ್ರಮದ ಪ್ರತೀಕ. ಸಾರ್ವಜನಿಕ ಗಣೇಶ ಉತ್ಸವದಲ್ಲಿ ಯಾವುದೇ ಕಾರಣಕ್ಕೂ ಮಾನ್ಯ ಸುಪ್ರೀಂ ಕೋರ್ಟ್ ಮತ್ತು ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಡಿಜೆ, ಡಾಲ್ಬಿ ಸೌಂಡ್ ಸಿಸ್ಟಮ್ ಬಳಸುವಂತಿಲ್ಲ. ಸಾರ್ವಜನಿಕರು ಹಾಗೂ ಪೊಲೀಸ್ ಇಲಾಖೆ ಪರಸ್ಪರ ಕೈಜೋಡಿಸಿ ಹಬ್ಬವನ್ನು ಅತ್ಯಂತ ಶಾಂತಿಯುತವಾಗಿ, ಸೌಹಾರ್ದತೆಯಿಂದ ಆಚರಿಸಬೇಕು” ಎಂದು ಕರೆ ನೀಡಿದರು. ಇದಕ್ಕೆ ಸ್ಪಂದಿಸಿದ ಗಣೇಶ ಮಂಡಳಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಯೊಂದಿಗೆ ಸಂಪೂರ್ಣವಾಗಿ ಸಹಕರಿಸುವುದಾಗಿ ಒಕ್ಕೊರಲಿನಿಂದ ಭರವಸೆ ನೀಡಿದರು.
ಅತ್ಯುತ್ತಮ ಗಣೇಶ ಮಂಡಳಿಗಳು – ಇರಬೇಕಾದ 6 ಮಾನದಂಡಗಳು:
ಪೊಲೀಸ್ ಇಲಾಖೆಯು ಮಾದರಿ ಮಂಡಳಿಗಳಾಗಿ ಆಯ್ಕೆಯಾಗಲು ಈ ಕೆಳಗಿನ ಷರತ್ತುಗಳನ್ನು ವಿಧಿಸಿದೆ:
- ಡಾಲ್ಬಿ ಹಾಕುವಂತಿಲ್ಲ
- 24*7 ಮಂಟಪದಲ್ಲಿ ಇಬ್ಬರು ಸ್ವಯಂ ಸೇವಕರಿರುವುದು.
- ಪ್ರತಿಷ್ಠಾಪನೆಯಿಂದ ಹಿಡಿದು ವಿಸರ್ಜನೆಯವರೆಗೆ ಯಾವುದೇ ವ್ಯಸನಿಯುಕ್ತ ವ್ಯಕ್ತಿಗಳು ಕಂಡುಬರುವಂತಿಲ್ಲ.
- ಅತ್ಯಂತ ಬೇಗನೆ ವಿಸರ್ಜನೆ ಮಾಡುವ ಮಂಡಳಿ
- ಕೊನೆಯ ಸೌಹಾರ್ದತೆಯನ್ನು ಕಾಪಾಡಿಕೊಂಡು ಹೋಗುವ ಮಂಡಳಿ
- ಇತರೆ ಎಲ್ಲಾ ಸುರಕ್ಷಿತ ನಿಯಮಗಳನ್ನು ಪಾಲಿಸುವ ಮಂಡಳಿ
ಈ ಎಲ್ಲಾ ಷರತ್ತುಗಳನ್ನು ಪಾಲಿಸಿದ ಮಂಡಳಿಗಳನ್ನು ಆಯ್ಕೆ ಮಾಡಿ ಮಾದರಿ ಮಂಡಳಿಗಳಾಗಿ ಸನ್ಮಾನ ಮಾಡಲಾಗುವುದೆಂದು ತಿಳಿಸಲಾಯಿತು.
ಕಳೆದ 2025ರ ಗಣೇಶೋತ್ಸವ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ನಿಯಮಾವಳಿಗಳನ್ನು ಚಾಚೂತಪ್ಪದೆ ಪಾಲಿಸಿ, ಅತ್ಯಂತ ಶಾಂತಿಯುತವಾಗಿ ಹಾಗೂ ನಿಗದಿತ ಸಮಯದೊಳಗೆ ವಿಸರ್ಜನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಅತ್ಯುತ್ತಮ ಗಣೇಶ ಮಂಡಳಿಗಳಿಗೆ ಸನ್ಮಾನಿಸಿ ವಿಶೇಷ ನೆನಪಿನ ಕಾಣಿಕೆ (ಟ್ರೋಫಿ), ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಪುರಸ್ಕೃತ ಪಡೆದ ಅತ್ಯುತ್ತಮ ಗಣೇಶ ಮಂಡಳಿಗಳು:
- ಮಂಗಳಮೂರ್ತಿ ಗಜಾನನ ಯುವಕ ಮಂಡಳ, ಸಾರಾಪೂರಗಲ್ಲಿ, ಯಮಕನಮರಡಿ
- ಗಜಾನನ ಯುವಕ ಮಂಡಳ, ಕಡಲಗಲ್ಲಿ, ಯಮಕನಮರಡಿ
- ಬಾಲ ಗಜಾನನ ಯುವಕ ಮಂಡಲ, ಉಳವಿಗಲ್ಲಿ, ಖಾನಾಪುರ
- ಗಜಾನನ ಯುವಕ ಮಂಡಳ (ಗಣಪತಿ ದೇವಸ್ಥಾನ), ಹಿಡಕಲ್ ಡ್ಯಾಮ್
- ಶ್ರೀ ಶಿವ ಗಣೇಶ ತರುಣ ಮಂಡಳ, ಪಾಟೀಲ ಗಲ್ಲಿ, ಮನಗುತ್ತಿ
- ಬಾಲ ಗಜಾನನ ಯುವಕ ಮಂಡಳ, ಕಮಾರ ಗಲ್ಲಿ, ಯಮಕನಮರಡಿ
- ಸಾರ್ವಜನಿಕ ಗಣಾನನ ಯುವಕ ಮಂಡಲ, ಮಾರ್ಕೆಟ್ ರಾಜ ಬಜಾರ್ ರೋಡ್, ಯಮಕನಮರಡಿ
ಭಾವೈಕ್ಯತೆ ಮತ್ತು ಸಮಾಜ ಸೇವಕರಿಗೆ ವಿಶೇಷ ಸನ್ಮಾನ:
ಸಮಾಜದಲ್ಲಿ ಶಾಂತಿ, ಸಾಮರಸ್ಯ ಕಾಪಾಡುವಲ್ಲಿ, ಗಣಿನೀಯ ಪಾತ್ರ ವಹಿಸಿದ ಪ್ರಮುಖರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.



