ಕರಪತ್ರ, ಪೋಸ್ಟರ್ ಮುದ್ರಣ ಮಾಲೀಕರ ಗಮನಕ್ಕೆ

ಲೋಕಸಭಾ ಸಾರ್ವತ್ರಿಕ ಚುನಾವಣೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ಕ್ಕೆ ಈಗಾಗಲೇ ಚುನಾವಣಾ ಆಯೋಗದಿಂದ ವೇಳಾಪಟ್ಟಿ ಪ್ರಕಟಿಸಲಾಗಿದೆ. ಚುನಾವಣಾ ಆಯೋಗದ ಮಾರ್ಗಸೂಚಿಯನ್ವಯ ಪ್ರಿಂಟಿಂಗ್ ಪ್ರೆಸ್ ಮಾಲಿಕರು ಚುನಾವಣಾ ಪ್ರಚಾರದ ಸಾಮಗ್ರಿಗಳ ಮುದ್ರಣ ಕಾರ್ಯ ಮಾಡಬೇಕು. ತಪ್ಪಿದಲ್ಲಿ ಶಿಸ್ತು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿಯಾದ ರಾಹುಲ್ ಶಿಂಧೆ ಆದೇಶ ಹೊರಡಿಸಿದ್ದಾರೆ.
ಕರಪತ್ರ, ಬಿತ್ತಿಪತ್ರ, ಮುದ್ರಣ ಮಾಡುವಾಗ ಅವುಗಳಲ್ಲಿ ಪ್ರಿಂಟಿಂಗ್ ಪ್ರೆಸ್ ಹೆಸರು ಹಾಗೂ ಮುದ್ರಿತ ಪ್ರತಿಗಳ ಸಂಖ್ಯೆ ನಮೂದಿಸುವುದು, ಮುದ್ರಕರು ಆಯೋಗವು ನಿಗದಿಪಡಿಸಿದ ಅರ್ಜಿ ನಮೂನೆಯಲ್ಲಿ ಪ್ರಕಾಶಕರಿಂದ ವಿವರಗಳನ್ನು ಪಡೆದು ಮುದ್ರಣ ಕಾರ್ಯ ಕೈಗೊಳ್ಳಬೇಕು. ಮುದ್ರಣವು ಉದ್ದೇಶಿತ ಪ್ರಕಾಶಕರಿಂದ ಸಹಿ ಮಾಡಲ್ಪಟ್ಟ ಮತ್ತು ಅವನ ವೈಯಕ್ತಿಕವಾಗಿ ತಿಳಿದಿರುವ ಇಬ್ಬರು ವ್ಯಕ್ತಿಗಳಿಂದ ದೃಢೀಕರಿಸಲ್ಪಟ್ಟ ಅವನ ಗುರುತಿನ ಘೋಷಣೆಯನ್ನು ದ್ವಿ-ಪ್ರತಿಯಲ್ಲಿ ಪಡೆಯಬೇಕು. ಮುದ್ರಣ ಘೋಷಣೆಯ ಒಂದು ಪ್ರತಿಯನ್ನು ಮತ್ತು ದಾಖಲೆಯ ಒಂದು ಪ್ರತಿಯನ್ನು ಮುದ್ರಿಸಿರುವ ಜಿಲ್ಲಾ ಮ್ಯಾಜಿಸ್ಟ್ರೇಟ್ ಇವರಿಗೆ ಸಲ್ಲಿಸಬೇಕು.
ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ರಾಜಕೀಯ ಮತ್ತು ಕೋಮುಗಲಭೆ, ದ್ವೇಷ ಭಾವನೆ ಕೆರಳಿಸುವಂತಹ ಬ್ಯಾನರ್, ಹೋಲ್ಡಿಂಗ್ಸ್ ಗಳಾಗಲಿ ಮತ್ತು ಕರಪತ್ರಗಳನ್ನಾಗಲಿ ಮುದ್ರಿಸುವಂತಿಲ್ಲ. ಚುನಾವಣಾ ಆಯೋಗ ನೀಡಿರುವ ಮಾರ್ಗಸೂಚಿಗಳು ಉಲ್ಲಂಘನೆಯಾದಲ್ಲಿ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದು ರಾಹುಲ ಶಿಂಧೆ ಅವರು ಆದೇಶದಲ್ಲಿ ತಿಳಿಸಿದ್ದಾರೆ.
 
					 
				 
					 
					 
					 
					
 
					 
					 
					


