ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಪೋಕ್ಸೋ ಕಾಯ್ದೆಯಡಿ ಪ್ರಕರಣವೊಂದರ ಬಗ್ಗೆ ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್, ಲೈಂಗಿಕವಾಗಿ ಬಳಸಿಕೊಳ್ಲುವ ಆಶಯವನ್ನಿಟ್ಟುಕೊಂಡು ಅಪ್ರಾಪ್ತೆಯನ್ನು ಬಟ್ಟೆ ಮೇಲಿಂದ ಸ್ಪರ್ಶಿಸುವುದು ಕೂಡ ಪೋಕ್ಸೋ ಕಾಯ್ದೆಯಡಿ ಅಪರಾಧವೆನಿಸಿಕೊಳ್ಲುತ್ತದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಲೈಂಗಿಕ ವಾಂಛೆಗಳನ್ನಿಟ್ಟುಕೊಂಡು ನೇರವಾಗಿ ದೇಹ ಸಂಪರ್ಕ ಮಾಡುವುದು, ಚರ್ಮದಿಂದ ಚರ್ಮಕ್ಕೆ ಸ್ಪರ್ಶಿಸುವುದು ಲೈಂಗಿಕ ದೌರ್ಜನ್ಯವಾಗಿದ್ದು, ಈ ಸಂಬಂಧ ಘಟನೆ ನಡೆದಾಗ ಮಾತ್ರ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಬೇಕು ಎಂದು 2021ರ ಜನವರಿಯಲ್ಲಿ ಬಾಂಬೆ ಹೈಕೋರ್ಟ್ ನ ನಾಗ್ಪುರ ಪೀಠ ತೀರ್ಪು ನೀಡಿತ್ತು. ಈ ತೀರ್ಪು ವಿವಾದಕ್ಕೆ ಕಾರಣವಾಗಿತ್ತು.
12 ವರ್ಷದ ಬಾಲಕಿಗೆ ಪೇರಲೆ ಹಣ್ಣಿನ ಆಮಿಷವೊಡ್ಡಿ ಮನೆಗೆ ಕರೆದುಕೊಂಡು ಹೋಗಿದ್ದ ವ್ಯಕ್ತಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಹೀಗೆಂದು ಬಾಲಕಿ ತಾಯಿ ದೂರು ನೀಡಿದ್ದರು. ಆದರೆ ಪ್ರಕರಣದ ವಿಚಾರಣೆ ನಡೆಸಿದ ನಾಗ್ಪುರ ಪೀಠದ ನ್ಯಾಯಾಧೀಶರಾದ ಪುಷ್ಪಾ ಗನೇಡಿವಾಲಾ ಎಂಬುವವರು ಅಪ್ರಾಪ್ತೆ ಜೊತೆ ಬಲವಂತವಾಗಿ ಸಂಭೋಗ ನಡೆಸುವುದು, ಆಕೆಯ ಖಾಸಗಿ ಅಂಗಗಳನ್ನು ಲೈಂಗಿಕ ಉದ್ದೇಶದಿಂದ ಸ್ಪರ್ಶಿಸುವುದು ಮತ್ತು ಅಪ್ರಾಪ್ತೆಯಿಂದ ವ್ಯಕ್ತಿಯೊಬ್ಬ ತನ್ನ ಖಾಸಗಿ ಅಂಗಗಳನ್ನು ಸ್ಪರ್ಶಿಸುವುದು ಪೋಕ್ಸೋ ಕಾಯ್ದೆಯಡಿ ಅಪರಾಧ ಎನಿಸಿಕೊಳ್ಳುತ್ತೆ. ಆದರೆ ಪ್ರಸ್ತುತ ಪ್ರಕರಣದಲ್ಲಿ ಹೀಗೆ ಆಗಿಲ್ಲ, ಇಲ್ಲಿ ಆರೋಪಿ ಬಾಲಕಿಯ ಸ್ತನವನ್ನು ಸ್ಪರ್ಶಿಸುವಾಗ ಆಕೆಯ ಬಟ್ಟೆಯನ್ನು ತೆಗೆಯಲಿಲ್ಲ. ನೇರವಾಗಿ ದೈಹಿಕ ಸಂಪರ್ಕವನ್ನೂ ಹೊಂದಿಲ್ಲ. ಹೀಗಾಗಿ ಈ ಕಾಯ್ದೆ ಪೋಕ್ಸೋ ಕಾಯ್ದೆಯಡಿ ಬರುವುದಿಲ್ಲ ಎಂದು ತೀರ್ಪು ನೀಡಿದ್ದರು.
ಈ ತೀರ್ಪನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ, ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಸೇರಿದಂತೆ ಹಲವರು ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಇದೀಗ ಬಾಂಬೆ ಹೈಕೋರ್ಟ್ ನ ಈ ತೀರ್ಪು ಮರು ಪರಿಶೀಲಿಸಿರುವ ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿಗಳಾದ ಯುಯು ಲಲಿತ್, ಎಸ್.ರವೀಂದ್ರ ಭಟ್ ಮತ್ತು ಬೇಲಾ ತ್ರಿವೇದಿ ಅವರನ್ನೊಳಗೊಂಡ ಪೀಠ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಎಗಾಗಿ ಬಂದಿರುವ ಕಾನೂನನು ಹೀಗೆ ಸಂಕುಚಿತ ಮತ್ತು ಅಸಂಬದ್ಧವಾಗಿ ಅರ್ಥೈಸುವುದು ಸರಿಯಲ್ಲ. ಇದರಿಂದ ಕಾಯ್ದೆ ಉದ್ದೇಶ ನಾಶವಾಗುತ್ತದೆ ಎಂದು ಗುಡುಗಿದೆ.
ಲೈಂಗಿಕವಾಗಿ ಬಳಸಿಕೊಳ್ಳುವ ಉದ್ದೇಶದಿಂದ ಅಪ್ರಾಪ್ತೆಯನ್ನು ಆಕೆ ತೊಟ್ಟಿದ್ದ ಬಟ್ಟೆ ಮೇಲಿಂದ ಸ್ಪರ್ಶಿಸಿದರೂ ಅದು ಪೋಕ್ಸೋ ಕಾಯ್ದೆಯಡಿ ಅಪರಾಧವೆನಿಸಿಕೊಳ್ಳುತ್ತದೆ ಎಂದು ಹೇಳುವ ಮುಲಕ ಬಾಂಬೆ ಹೈಕೋರ್ಟ್ ತೀರ್ಪು ರದ್ದು ಮಾಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ