*ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಅದ್ಧೂರಿ ಆಚರಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು, ಕಾಯಕ ಹಾಗೂ ವಚನ ಸಾಹಿತ್ಯದ ಮೂಲಕ ಸಮಾಜದ ಏಳಿಗೆಗೆ ಶ್ರಮಿಸಿದ ಶಿವಶರಣ ಹಡಪದ ಅಪ್ಪಣ್ಣನವರ ಆದರ್ಶಗಳು ಪ್ರತಿಯೊಬ್ಬರಿಗೂ ದಾರಿದೀಪ ಎಂದು ಬೆಳಗಾವಿ ಮಹಾನಗರ ಪಾಲಿಕೆಯ ಉಪ ಮಹಾಪೌರರಾದ ಹನುಮಂತ ಕೊಂಗಾಲಿ ಅವರು ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಳಗಾವಿ ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಶನಿವಾರ (ಆ. 1) ಜರುಗಿದ ಶ್ರೀ ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಮೇಲು-ಕೀಳು ಎಂಬ ಭಾವನೆ ಅಳಿದು ಸಮಾನತೆ ಮೂಡಬೇಕೆಂದು ಹಡಪದ ಅಪ್ಪಣ್ಣನವರು ಶ್ರಮಿಸಿದ್ದರು. ಪ್ರತಿಯೊಬ್ಬರೂ ಅವರ ತತ್ವ-ಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿಜಯಪುರದ ಡಾ. ಭೀಮಾಶಂಕರ ಹಡಪದ ಅವರು ಮಾತನಾಡಿ, “ಅನುಭವ ಮಂಟಪದ ಪ್ರಮುಖ ಆಧಾರ ಸ್ತಂಭವೇ ಶಿವಶರಣ ಹಡಪದ ಅಪ್ಪಣ್ಣನವರು, ಬಸವೇಶ್ವರರು ಹಾಗೂ ಹಡಪದ ಅಪ್ಪಣ್ಣನವರ ಅನ್ನೋನ್ಯತೆಯನ್ನು
ವರ್ಣಿಸಲು ಪದಗಳೇ ಸಾಲದು. ಹಡಪದ ಅಪ್ಪಣ್ಣನವರ ಮೂಲ ಹೆಸರು ‘ಜೀವಣ್ಣ’ ಎಂದಾಗಿದ್ದ ಅವರು ತಮ್ಮ ಧ್ಯಾನ ಶಕ್ತಿಯಿಂದ ಜ್ಞಾನ ಪಡೆದ ಅಂಗಮ್ಮನವರನ್ನು ವಿವಾಹವಾಗಿದ್ದರು.
ಸಮಾಜದ ಕುಲ ಕಸುಬನ್ನು ಅವಮಾನ ಎಂದು ಭಾವಿಸದೆ ಕಾಯಕವಾಗಿ ನಿರ್ವಹಿಸಬೇಕು.ಅನುಭವ ಮಂಟಪಕ್ಕೆ ಕಿರೀಟ ಪ್ರಾಯರಾಗಿ, ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ, ತಮ್ಮ ವಚನಗಳ ಮೂಲಕ ಕಾಯಕ ನಿಷ್ಠೆಯ ಮೂಲಕ ಇಡೀ ಮನುಕುಲಕ್ಕೆ ಸದಾ ಕಾಲ ಪ್ರಸ್ತುತವಾದ ಸಂದೇಶವನ್ನು ನೀಡಿದಂತಹ ಹಡಪದ ಅಪ್ಪಣ್ಣನವರ ಜೀವನವನ್ನ ಆದರ್ಶವಾಗಿಸಿಕೊಳ್ಳುವಂತೆ ಹೇಳಿದರು.
ಬಸವಣ್ಣನವರು ಹಡಪದ ಅಪ್ಪಣ್ಣನವರ ಬಹುಮುಖ ರಂಗದ ಸಾಮರ್ಥ್ಯವನ್ನು ಗುರುತಿಸಿ ತಮ್ಮ ಆಪ್ತ ಕಾರ್ಯದರ್ಶಿಯಾಗಿ ನೇಮಿಸಿಕೊಂಡಿದ್ದರು. ಜ್ಞಾನವೇ ಬಹುದೊಡ್ಡ ಶಕ್ತಿಯಾಗಿದ್ದು, ಪ್ರತಿಯೊಂದು ಕುಟುಂಬವೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಬೇಕು ಹಾಗೂ ಯುವಜನರು ಯಾವುದೇ ದುರ್ವ್ಯಸನಗಳಿಗೆ ಒಳಗಾಗಬಾರದು ಎಂದು ಡಾ. ಭೀಮಾಶಂಕರ ಹಡಪದ ಅವರು ವಿಶೇಷ ಉಪನ್ಯಾಸ ನೀಡಿದರು.
ಸಮುದಾಯದ ಮುಖಂಡರಾದ ಸಂತೋಷ ಹಡಪದ ಅವರು ಮಾತನಾಡಿ, ‘ಹಡಪದ ಅಪ್ಪಣ್ಣನವರು ಕನಸು ಕಂಡಿದ್ದ ಸಮಸಮಾಜದ ನಿರ್ಮಾಣ ಇಂದಿನ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ, ಸಮಾಜಕ್ಕೆ ನಾವೇನು ನೀಡಿದ್ದೇವೆ ಎಂದು ಯೋಚಿಸಬೇಕಿದೆ ಎಂದರು.
ಆಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (Al) ಬೆಳೆದಂತೆ ಕಾಯಕ ಪ್ರಜ್ಞೆ ಕುಂಠಿತಗೊಳ್ಳಬಾರದು ಆದರೆ ಇತ್ತೀಚಿನ ದಿನಮಾನಗಳಲ್ಲಿ ಮಾನವನ ಕೆಲಸ ಕಾರ್ಯಗಳು ತುಂಬಾ ತಳಮಟ್ಟಕ್ಕೆ ಇಳಿದಿವೆ. ಮಾನವನು ಹೆಚ್ಚು ಡಿಜಿಟಲ್ ಯುಗಕ್ಕೆ (ಕೃತಕ ಬುದ್ಧಿಮತ್ತೆ) ಹೊಂದಿಕೊಂಡು ಅತಿಯಾದ ಬಳಕೆಯಿಂದ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದ್ದಾನೆ ಎಂದು ಮುಖಂಡ ಸಂತೋಷ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮಹಾಪೌರರಾದ ಪ್ರೀತಿ ಕಾಮಕರ, ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ್ ತಳವಾರ, ಮಹಾನಗರ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಲಕ್ಷ್ಮಿ ರಾಥೋಡ್,ಅಖಿಲ ಕರ್ನಾಟಕ ಹಡಪದ ಸಮಾಜ ಸೇವಾ ಸಂಘದ ರಾಜ್ಯ ಅಧ್ಯಕ್ಷರಾದ ಡಾಕ್ಟರ್ ದೇವು ಹಡಪದ, ರಾಜ್ಯ ಉಪಾಧ್ಯಕ್ಷ ಸುರೇಶ್ ಹಡಪದ, ಜಿಲ್ಲಾಧ್ಯಕ್ಷ ಶಿವಾನಂದ ಹುನ್ನೂರು, ತಾಲೂಕ ಅಧ್ಯಕ್ಷ ಮಹಾಂತೇಶ್ ಹಂಪಣ್ಣವರ ಸೇರಿದಂತೆ ಸುರೇಶ್ ಹಡಪದ, ಸಂಗಪ್ಪ ಹಡಪದ, ರಾಜು ನಾವಿ, ಸಂತೋಷ್ ನಾವಿ, ನಾಗಪ್ಪ ಹಡಪದ, ನೌಕರರ ಸಂಘದ ಅಧ್ಯಕ್ಷ ಧನಂಜಯ ಹೊಂಗಲ್ ಉಪಸ್ಥಿತರಿದ್ದರು.
ಭವ್ಯ ಮೆರವಣಿಗೆ:
ಕಾರ್ಯಕ್ರಮಕ್ಕೂ ಮುನ್ನ ನಗರದ ಅಶೋಕ ವೃತ್ತದಲ್ಲಿ ಶಿವಶರಣ ಹಡಪದ ಅಪ್ಪಣ್ಣ ಅವರ ಭಾವ ಚಿತ್ರಕ್ಕೆ ಸಂಸದರಾದ ಜಗದೀಶ ಶೆಟ್ಟರ, ಬಿಜೆಪಿ ಮುಖಂಡೆ ಡಾ. ಸೋನಾಲಿ ಸರ್ನೋಬತ್ ಅವರು ಪುಷ್ಪ ನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ಅಶೋಕ ವೃತ್ತದಿಂದ ಪ್ರಾರಂಭವಾದ ಭವ್ಯ ಮೆರವಣಿಗೆಯು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಕುಮಾರ ಗಂಧರ್ವ ಕಲಾ ಮಂದಿರಕ್ಕೆ ಆಗಮಿಸಿ ಸಮಾರೋಪಗೊಂಡಿತು. ಮೆರವಣಿಗೆಯಲ್ಲಿ ಕನ್ನಡ ಮತ್ತು ಸಂಸ್ಥೆ ಇದಾಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಸೇರಿದಂತೆ ಮತ್ತಿತರರು ಇದ್ದರು.




