Election NewsTravelWorld
*ಕೊಲಂಬಿಯಾ ಅಧ್ಯಕ್ಷೀಯ ಅಭ್ಯರ್ಥಿ ಮೇಲೆ ಗುಂಡಿನ ದಾಳಿ: ದಿಕ್ಕಾಪಾಲಾಗಿ ಓಡಿದ ಜನ*

ಪ್ರಗತಿವಾಹಿನಿ ಸುದ್ದಿ: ಕೊಲಂಬಿಯಾದ ಅಧ್ಯಕ್ಷೀಯ ಅಭ್ಯರ್ಥಿ ಮಿಗುಯೆಲ್ ಅವರ ಮೇಲೆ ಬೊಗೋಟಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಗುಂಡು ಹಾರಿಸಲಾಗಿದೆ ಎಂದು ಕೊಲಂಬಿಯಾದ ರಾಷ್ಟ್ರೀಯ ಪೊಲೀಸ್ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಬೊಗೋಟಾದಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುತ್ತಿದ್ದ ಮಿಗುಯೆಲ್ ಉರಿಬೆ ಅವರ ಮೇಲೆ ಗುಂಡು ಹಾರಿಸಲಾಗಿದೆ. ಗುಂಡಿನ ಸದ್ದು ಕೇಳಿದ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಸದ್ಯ ಅವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎನ್ನಲಾಗಿದೆ.
2026ರ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿರುವ 39 ವರ್ಷದ ಉರಿಬೆ, ಮಾಜಿ ಕೊಲಂಬಿಯಾದ ಅಧ್ಯಕ್ಷ ಅಲ್ವಾರೊ ಉರಿಬೆ ಸ್ಥಾಪಿಸಿದ ಡೆಮಾಕ್ರಟಿಕ್ ಸೆಂಟರ್ ಪಕ್ಷದ ಸದಸ್ಯರಾಗಿದ್ದಾರೆ.
ಈ ದಾಳಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ. ಶಂಕಿತ ದಾಳಿಕೋರನನ್ನು ಬಂಧಿಸಲಾಗಿದೆ ಎಂದು ಬೊಗೋಟಾದ ಮೇಯರ್ ದೃಢಪಡಿಸಿದ್ದಾರೆ.



