Belagavi NewsBelgaum News

*ಜಾನುವಾರುಗಳ ಲಸಿಕಾ ಅಭಿಯಾನ ಯಶಸ್ವಿಗೆ ಕ್ರಮ ವಹಿಸಬೇಕು: ಡಿಸಿ ಮೊಹಮ್ಮದ್ ರೋಷನ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯಾದ್ಯಂತ 7ನೇ ಸುತ್ತಿನ ಕಾಲು ಬಾಯಿ ರೋಗ ಲಸಿಕಾ ಅಭಿಯಾನ ಏಪ್ರಿಲ್ 21 ರಿಂದ ಜೂನ್ 6 ರವರೆಗೆ ನಡೆಯಲಿದ್ದು, ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಲು ಎಲ್ಲಾ ಪಶು ವೈದ್ಯಾಧಿಕಾರಿಗಳು ಶ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು

ಪಶು ಪಾಲನಾ ಮತ್ತು ಪಶು ವೈದ್ಯಕೀಯ ಕಚೇರಿಯಲ್ಲಿ ಬುಧವಾರ (ಏ.16) ನಡೆದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 7ನೇ ಸುತ್ತಿನ ಕಾಲು ಬಾಯಿ ಬೇನೆ ಲಸಿಕಾ ಕಾರ್ಯಕ್ರಮದ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Home add -Advt

ಮನೆ ಮನೆಗೆ ತೆರಳಿ ಜಾನುವಾರುಗಳಿಗೆ ಉಚಿತ ಲಸಿಕೆ ಅಭಿಯಾನ ಹಮ್ಮಿಕೊಂಡಿರುವ ಕುರಿತು ಸ್ಥಳೀಯ ಮಟ್ಟದಲ್ಲಿ ಸಾರ್ವಜನಿಕರಿಗೆ ಮುಂಚಿತವಾಗಿಯೇ ಮಾಹಿತಿ ನೀಡಬೇಕು ಎಂದು ಹೇಳಿದರು.

ಏಳನೇ ಸುತ್ತಿಗೆ 13 ಲಕ್ಷ ಲಸಿಕೆ ಸರಬರಾಜು ಆಗಿದೆ. ಕಳೆದ ವರ್ಷ 30 ಸಾವಿರ ಲಸಿಕೆ ಬಾಕಿ ಉಳಿದಿದೆ. ಲಸಿಕಾ ಅಭಿಯಾನಕ್ಕೆ ಯಶಸ್ವಿಗೆ ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು.

ಎಸ್.ಸಿ. ಎಸ್.ಟಿ ವರ್ಗದವರಿಗೆ ಆಸಕ್ತ ಉಳ್ಳವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಮಾಹಿತಿ ಪಡೆದು ಪಶು ಸಂಗೋಪನಾ ಇಲಾಖೆಯ ಯೋಜನೆಗಳು ಸಮರ್ಪಕವಾಗಿ ತಲುಪಿಸಬೇಕು ಎಂದು ತಿಳಿಸಿದರು.

ಕಳೆದ 10 ತಿಂಗಳಿಂದ ಪಶು ಸಂಗೋಪನಾ ಇಲಾಖೆಯಿಂದ ಯಾವುದೇ ತೊಂದರೆ ಎದುರಾಗಿಲ್ಲ. ಎಲ್ಲಾ ತಾಲೂಕುಗಳಲ್ಲಿ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಇಲಾಖೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ ಮಾತನಾಡಿ ಬೆಳಗಾವಿ ನಗರದಲ್ಲಿ ಬೀದಿ ನಾಯಗಳ ನಿರ್ವಹಣೆಗೆ ಮಹಾನಗರ ಪಾಲಿಕೆ, ಪ್ರಾಣಿ ದಯಾ ಸಂಘ, ಪಶು ಸಂಗೋಪನಾ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳೊಂದಿಗೆ ಸಮಯನ್ವದೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ. ರಾಜೀವ್ ಕೂಲೇರ್ 20ನೇ ಜಾನವಾರುಗಳ ಗಣತಿಯ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 13,93,711 ಜಾನುವಾರುಗಳಿದ್ದು, 6 ನೇ ಸುತ್ತಿನ ಲಸಿಕಾ ಅಭಿಯಾನದಲ್ಲಿ 12,35,123 ಜಾನುವಾರುಗಳಿಗೆ ಲಸಿಕೆ ನೀಡಲಾಗಿರುತ್ತದೆ ಎಂದರು.

7ನೇ ಸುತ್ತಿನ ಕಾಲು ಬಾಯಿ ಬೇನೆ ಲಸಿಕೆ ಕಾರ್ಯಕ್ರಮ ಅನುಷ್ಠಾನಕ್ಕಾಗಿ ಜಿಲ್ಲೆಯಲ್ಲಿ ಹದಿಮೂರು ಲಕ್ಷ ಲಸಿಕೆ ಲಭ್ಯವಿದ್ದು ಈ ಕಾರ್ಯಕ್ಕಾಗಿ ಇಲಾಖೆ ಹಾಗೂ ಇಲಾಖೆತರ ಒಟ್ಟು 1,111 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಜಾನುವಾರುಗಳ ಸಂಖ್ಯೆ ಕಡಿಮೆ ಇರುವ ಕಾರಣ ಯರಗಟ್ಟಿಯಲ್ಲಿ ಕಳೆದ ವರ್ಷ ಲಸಿಕೆ ಪ್ರಮಾಣ ಕಡಿಮೆಯಾಗಿದೆ. ಲಸಿಕೆ ನೀಡುವುದರಿಂದ ಈವರೆಗೆ ಯಾವುದೇ ಅಡ್ಡ ಪರಿಣಾಮ ತೊಂದರೆಯಾಗಿಲ್ಲ ಎಂದು ಪಶು ವೈದ್ಯಾಧಿಕಾರಿಗಳು ವಿವರಿಸಿದರು.

ಪೋಸ್ಟರ್ ಬಿಡುಗಡೆ

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ ಅವರು

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 7ನೇ ಸುತ್ತಿನ ಕಾಲು ಬಾಯಿ ಬೇನೆ ಲಸಿಕಾ ಅಭಿಯಾನದ ಪೋಸ್ಟರ್ ಬಿಡುಗಡೆಗೊಳಿಸಿದರು.

ಜಿಲ್ಲಾ ನಗರಾಭಿವೃದ್ಧಿ ಯೋಜನಾ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ್ ಕಲಾದಗಿ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಆನಂದ ಪಾಟೀಲ, ಪಶು ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Related Articles

Back to top button