Belagavi NewsBelgaum NewsElection NewsKannada NewsKarnataka NewsPolitics

ನ್ಯಾಯದ ಪರವಿರುವ ಕಾಂಗ್ರೆಸ್‌ ಬೆಂಬಲಿಸಿ: ಕೈ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ನಮ್ಮ ಕಾಂಗ್ರೆಸ್ ಸರ್ಕಾರ ಪ್ರಾರಂಭಿಸಿದ ಗ್ಯಾರಂಟಿ ಯೋಜನೆಗಳು ಜನರಿಗೆ ಅನುಕೂಲ ಮಾಡಿಕೊಡುವುದರ ಜೊತೆಗೆ ಅಭಿವೃದ್ಧಿ ಕಾಮಗಾರಿಗಳಿಗೂ ಒತ್ತು ನೀಡಿದೆ. ಹೀಗಾಗಿ ಸಾಮಾಜಿಕ ನ್ಯಾಯದ ಪರವಿರುವ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುವ ಮೂಲಕ ಮೇ 07ರಂದು ಕೈ ಚಿಹ್ನೆಗೆ ಮತ ಚಲಾಯಿಸುವ ಮೂಲಕ ನನ್ನನ್ನು ಸಂಸದೆಯಾಗಿ ಆಯ್ಕೆ ಮಾಡಬೇಕು ಎಂದು ಚಿಕ್ಕೋಡಿ ಲೋಕಸಭಾ ಕೈ ಅಭರ್ಥಿ  ಪ್ರಿಯಂಕಾ ಜಾರಕಿಹೊಳಿ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಚಿಕ್ಕೋಡಿ ಲೋಕಸಭಾ ಚುನಾವಣೆಯ ಪ್ರಯುಕ್ತ  ಯಮಕನಮರಡಿ ವಿಧಾನಸಭಾ ಕ್ಷೇತ್ರದ ಹುದಲಿ ಜಿಲ್ಲಾ ಪಂ ವ್ಯಾಪ್ತಿಯ ರಂಗಧೋಳಿ ಗ್ರಾಮಕ್ಕೆ ಭೇಟಿ ನೀಡಿ ಮತಯಾಚಿಸಿ ನಂತರ ಮಾತನಾಡಿದ ಅವರು, ಬಿಜೆಪಿ ಕೇಂದ್ರ ಹಾಗೂ ರಾಜ್ಯ ನಾಯಕರು ಸುಳ್ಳು ಭರವಸೆಗಳನ್ನು ನೀಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಹೇಳಿ ಇಲ್ಲಿಯ ತನಕ ಒಂದು ಉದ್ಯೋಗವನ್ನೂ ಸೃಷ್ಟಿಸಿಲ್ಲ. ಆದ್ದರಿಂದ ಬಿಜೆಪಿಯ ಸುಳ್ಳು ಭರವಸೆಗಳಿಗೆ ನಂಬಿ ಮತ ಹಾಕದೆ ನುಡಿದಂತೆ ನಡೆದ ಕಾಂಗ್ರೆಸ್‌ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಗ್ಯಾರಂಟಿ  ಪ್ರತಿ ಮನೆಗೆ ತಿಳಿಸಿ: ಕಾಂಗ್ರೆಸ್ ನುಡಿದಂತೆ ನಡೆದಿದೆ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ವಿಧಾನಸಭೆ ಚುನಾವಣೆಗೂ ಮುನ್ನ ಘೋಷಿಸಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ.  ಮುಖ್ಯವಾಗಿ ಕಾಂಗ್ರೆಸ್ ಸರ್ಕಾರ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಇದನ್ನು ಮನೆಮನೆಗೆ ತಲುಪಿಸುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ನನ್ನ ಗೆಲುವಿಗೆ ಸಹಕರಿಸಬೇಕು ಎಂದರು.
ಈ‌‌ ಸಂದರ್ಭದಲ್ಲಿ ಸಚಿವರ ಆಪ್ತ ಸಹಾಯಕ  ಅರವೀಂದ ಕಾರ್ಚಿ ಸೇರಿದಂತೆ ರಂಗಧೋಳಿ  ಗ್ರಾಮದ ಮುಖಂಡರು, ಹಿರಿಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


ರಾಮಾಪೂರ, ಮಾಸ್ತಿಹೊಳಿಹಾಗೂ ಕಬಲಾಪೂರ ಗ್ರಾಮಗಳಲ್ಲಿ ಕಾರ್ಯಕರ್ತರ ಸಭೆ

ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ತೆರಳಿ ಬಿಜೆಪಿ ವೈಫಲ್ಯಗಳನ್ನು ತಿಳಿಸಿ ಹೆಮ್ಮೆಯಿಂದ ‌ ಕೈ ಅಭ್ಯರ್ಥಿ ಪರ ಮತಯಾಚಿಸಿ ನನ್ನನ್ನು ಗೆಲ್ಲಿಸುವಂತೆ ಮಾಡಬೇಕು ಎಂದು ಚಿಕ್ಕೋಡಿ ಕೈ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಮನವಿ ಮಾಡಿದರು.

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣೆ ಪ್ರಯುಕ್ತ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಹುದಲಿ ಜಿಲ್ಲಾ ಪಂ ವ್ಯಾಪ್ತಿಯ ರಾಮಾಪೂರ, ಮಾಸ್ತಿಹೊಳಿ, ಹಾಗೂ ಕಬಲಾಪೂರ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾದ ಕಾಂಗ್ರೆಸ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಕೇಂದ್ರ ಸರ್ಕಾರದ ದುರಾಡಳಿತದಿಂದ ನೊಂದ ಜನರಿಗೆ ನಮ್ಮ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ನೆಮ್ಮದಿ ದೊರಕಿದ್ದು, ನಮ್ಮ ಕಾರ್ಯಕರ್ತರು ಮನೆ ಮನೆಗೆ ತೆರಳಿ ಬಿಜೆಪಿ ಸಂಸದರ ವೈಫಲ್ಯಗಳನ್ನು ತಿಳಿಸಲು ಮುಂದಾಗಬೇಕು ಎಂದರು.

ಕಾಂಗ್ರೆಸ್ ಯೋಜನೆಗಳ ಫಲಾನುಭವಿಗಳಿಗೆ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಅರಿವು ಮೂಡಿಸುವ ಮಹತ್ತರವಾದ ಜವಾಬ್ದಾರಿ ಮಹಿಳಾ ಮುಖಂಡರು ಹಾಗೂ ಕಾರ್ಯಕರ್ತೆಯರ ಮೇಲಿದೆ ಎಂದ ಅವರು, ದೇಶದ ಭದ್ರ ಬುನಾದಿಗೆ ಯುವಕರು ರಾಜಕೀಯಕ್ಕೆ ಬರಬೇಕಾಗಿದೆ. ಹೀಗಾಗಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಸಿಕ್ಕಿದೇ , ಕ್ಷೇತ್ರದ ಜನರ ಸೇವೆ ಮಾಡಲು ಮತದಾರರು ನನಗೆ ಆಶೀರ್ವಾದ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಸಚಿವರ ಆಪ್ತ ಸಹಾಯಕ ಅರವೀಂದ ಕಾರ್ಚಿ ಹಾಗೂ ಗ್ರಾಮದ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಸರ್ವತೋಮುಖದ ಅಭಿವೃದ್ಧಿಗಾಗಿ ಕೈ ಪಕ್ಷ ಬೆಂಬಲಿಸಿ: ಕೈ ಅಭ್ಯರ್ಥಿ ಪ್ರಿಯಂಕಾ  ಜಾರಕಿಹೊಳಿ

 ಚಿಕ್ಕೋಡಿ ಲೋಕಸಭಾ  ಸರ್ವತೋಮುಖದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಮನವಿ ಮಾಡಿದರು.

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಚುನಾವಣೆ ಪ್ರಯುಕ್ತ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಹುದಲಿ ಜಿಲ್ಲಾಪಂಚಾಯಿತಿ ವ್ಯಾಪ್ತಿಯ ಚಂದಗಡ ಗ್ರಾಮದಲ್ಲಿ ಹಮ್ಮಿಕೊಳ್ಳಲಾದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ನಾನು ಕಳೆದ 4-5 ವರ್ಷಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ಸ್ವಯಂಪ್ರೇರಿತರಾಗಿ ತೊಡಗಿಸಿಕೊಂಡಿದ್ದು, ತಾವೆಲ್ಲರೂ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ನನ್ನನ್ನು ಲೋಕಸಭೆಗೆ ಆಯ್ಕೆ ಮಾಡಿರಿ ಎಂದು ಮನಪೂರ್ವಕವಾಗಿ ಕಾರ್ಯಕರ್ತರಲ್ಲಿ ಕೇಳಿಕೊಂಡರು.

ಚಿಕ್ಕೋಡಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ನನಗೆ  ಮತದಾರರು ಮತ ನೀಡುವಂತೆ  ಕೈ ಕಾರ್ಯಕರ್ತರು ಕಾಂಗ್ರೆಸ್‌ ಜಾರಿಗೆ ತಂದ ಯೋಜನೆಗಳನ್ನು ಮನೆ ಮನೆಗೆ ತಿಳಿಸಿಬೇಕು. ಸಚಿವರಾದ ನಮ್ಮ ತಂದೆಯವರಾದ ಸತೀಶ್ ಜಾರಕಿಹೊಳಿ ಅವರನ್ನು ಹಾಗೂ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಚಿಕ್ಕೋಡಿ ಲೋಕಸಭೆಯ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಹಾಗೂ ಸುವರ್ಣ ಚಿಕ್ಕೋಡಿ ಕನಸು ನನಸು ಮಾಡಲಾಗುವುದು ಎಂದರು.

ಈ ವೇಳೆಸಚಿವರ ಆಪ್ತ ಸಹಾಯಕರಾದ ಅರವೀಂದ ಕಾರ್ಚಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್‌ ಮುಖಂಡರ ಕೊಡುಗೆ ಅಪಾರ. ಸಾಮಾಜಿಕ ನ್ಯಾಯ ಕೊಡುವಲ್ಲಿ ಕಾಂಗ್ರೆಸ್‌ ಪಕ್ಷ ದ ಪಾತ್ರ ಮುಖ್ಯ ಪಾತ್ರ ವಹಿಸಿದೆ. ಇಂದಿನ ನಿರುದ್ಯೋಗ ಹೆಚ್ಚಳಕ್ಕೆ ಬಿಜೆಪಿಯೇ ಕಾರಣ. ಅಚ್ಛೆ ದಿನ್‌ ಬರುತ್ತವೆ ಎಂದು ಹೇಳಿರುವ ಬಿಜೆಪಿ, 10 ವರ್ಷ ಗತಿಸಿದರೂ ಯಾವುದೇ ಅಚ್ಛೆ ದ್ದಿನ್‌ ತರಲಿಲ್ಲ. ಕಾಂಗ್ರೆಸ್‌ ಕಾರ್ಯಕರ್ತರು ಅಭಿವೃದ್ಧಿ ಹಾಗೂ ಪಕ್ಷ ದ ತತ್ವ ಸಿದ್ಧಾಂತಗಳನ್ನು ಜನರಿಗೆ ಮುಟ್ಟಿಸುವ ಮೂಲಕ ಬೂತ್ ಮಟ್ಟದಿಂದ ಪಕ್ಷ ಸಂಘಟಿಸಲು ಕಾರ್ಯಕರ್ತರು ಸಿದ್ದರಾಗಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಸಚಿವರ ಆಪ್ತ ಸಹಾಯಕ ಅರವಿಂದ ಕಾರ್ಚಿ ಹಾಗೂ ಚಂದಗಡ ಗ್ರಾಮದ ಹಿರಿಯ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button