Belagavi NewsKannada NewsKarnataka NewsLatest

ನಂಬಿದ ಪರಮಾತ್ಮನನ್ನು ನೆನೆಯುವುದರಲ್ಲೇ ಪರಮಸುಖ: ಸಚಿವೆ ಲಕ್ಷ್ಮೀ ಹೆಬ್ಬಾಳಕರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಾವು ನಂಬಿರುವ ಪರಮಾತ್ಮನನ್ನು ನೆನೆಯುವುದರಲ್ಲೇ ಪರಮಸುಖವಿದ್ದು, ಇಂತಹ ಸಂದೇಶವನ್ನು ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯ ಸಮಾಜಕ್ಕೆ ಸಾರುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರು ಮತ್ತು ವಿಕಲಚೇತನರ ಸಬಲೀಕರಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಬೆಳಗಾವಿ ನಗರದ ಲಕ್ಷ್ಮೀ ನಗರದ ಸಿದ್ಧಿವಿನಾಯಕ ಕಾಲನಿಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ‘ಜ್ಞಾನ ಪ್ರಕಾಶ ಕುಂಜ’ ದ ವತಿಯಿಂದ ಆಯೋಜಿಸಲಾಗಿದ್ದ ಸತ್ಕಾರ ಸಮಾರಂಭದಲ್ಲಿ ಭಾಗಿಯಾಗಿ, ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.

Home add -Advt

“ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿದ್ಯಾಲಯಕ್ಕೆ ತನ್ನದೇ ಆದ ವಿಶೇಷತೆಯಿದ್ದು, ಸಮಾಜವನ್ನು ಆಧ್ಯಾತ್ಮಿಕವಾಗಿ ಸೆಳೆದು, ಮನ ಮತ್ತು ಮನಸ್ಸುಗಳಿಗೆ ಶಾಂತಿಯನ್ನು ನೀಡುವುದಲ್ಲದೆ ಮಾನಸಿಕ ಸ್ಥಿರತೆ, ಏಕಾಗ್ರತೆ, ಸಕಾರಾತ್ಮಕ ಚಿಂತನೆಯಿಂದ ಮಾನಸಿಕ ಬಲವರ್ಧನೆ, ಒತ್ತಡಮುಕ್ತ ಖುಷಿಯ ಜೀವನ, ಆರೋಗ್ಯದಲ್ಲಿ ಸುಧಾರಣೆ ಹಾಗೂ ಮುಂತಾದ ಚಟುವಟಿಕೆಗಳಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮುಂಚೂಣಿಯಲ್ಲಿದೆ” ಎಂದು ಅವರು ಹೇಳಿದರು.

“ನಾವು ರಾಜಕಾರಣಿಗಳು ರಾಜಕಾರಣದ ಮೂಲಕ ಹಲವಾರು ಆಸೆ, ಆಕಾಂಕ್ಷೆ, ಗುರಿಗಳನ್ನಿಟ್ಟುಕೊಂಡು ಸಮಾಜದಲ್ಲಿ ಹೆಸರು ಮಾಡಲು ಹೊರಟಿದ್ದೇವೆ, ಆದರೆ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ನಿಸ್ವಾರ್ಥ ಭಾವನೆಯಿಂದ ಸಮಾಜವನ್ನು ಸುಧಾರಿಸುವ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ” ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ರಾಜಯೋಗಿನಿ ಬ್ರಹ್ಮಕುಮಾರಿ ಸುಲೋಚನ ಅಕ್ಕ, ವಿದ್ಯಾ ಅಕ್ಕ, ಮಿನಾಕ್ಷಿ ಅಕ್ಕ, ವಿಠ್ಠಲ ದೇಸಾಯಿ, ಯುವರಾಜಣ್ಣ ಕದಂ ಹಾಗೂ ಮುಂತಾದವರು ಉಪಸ್ಥಿತರಿದ್ದರು.

Related Articles

Back to top button