ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮ ಗಾಂಧಿಜೀಯನ್ನೇ ಕೊಂದಿದ್ದವರು. ಇನ್ನು ಮಾಜಿ ಮುಖ್ಯಮಂತ್ರಿಯಾದ ನನ್ನನ್ನು ಬಿಡ್ತಾರಾ? ಹಿಂದೂ ಸಂಘಟನೆಗಳಿಂದಲೇ ತಮಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ತಮಗೆ ಜೀವ ಬೆದರಿಕೆ ಪತ್ರ ಹಾಗೂ ಕರೆಗಳು ಬರುತ್ತಿರುವ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಆರ್ಎಸ್ಎಸ್, ಹಿಂದೂ ಸಂಘಟನೆಗಳಿಂದಲೇ ತಮಗೆ ಬೆದರಿಕೆ ಕರೆಗಳು ಬರುತ್ತಿದ್ದು, ಇಂತಹ ಬೆದರಿಕೆಗಳಿಗೆ ಬಗ್ಗುವವನಲ್ಲ. ಕೆಲ ಕೈಲಾಗದವರು ಪತ್ರ ಬರೆದು ಬೆದರಿಕೆ ಒಡ್ಡುತ್ತಾರೆ. ಇದಕ್ಕೆಲ್ಲ ನಾನೂ ಬೆದರಲ್ಲ ನನ್ನ ಹೋರಾಟಾ ನಿರಂತವಾಗಿ ಇರುತ್ತೆ ಎಂದರು.
ನಾನು ದೇವರನ್ನು ನಂಬಿ ಬದುಕಿದವನು. ದೇವರು ನಮ್ಮ ಆಯುಷ್ಯ ನಿರ್ಧಾರ ಮಾಡಿರುತ್ತಾನೆ. ನನ್ನನ್ನು ಮುಟ್ಟೋಕು ಇವರಿಂದ ಸಾಧ್ಯವಿಲ್ಲ. ನಾಜಿ ಸಂಘಟನೆಗೂ, ಆರ್.ಎಸ್.ಎಸ್ ಗೂ ವ್ಯತ್ಯಾಸವಿಲ್ಲ. ಗಾಂಧಿಯನ್ನೇ ಕೊಂದವರು ಇವರು. ನನಗೆ ಬೆದರಿಕೆ ಹಾಕದೇ ಇರುತ್ತಾರಾ? ಆದರೆ ನನ್ನ ಮುಟ್ಟೋಕು ಇವರಿಂದ ಆಗುವುದಿಲ್ಲ. ಮುಟ್ಟಿದರೆ ಪರಿಣಾಮ ಊಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಇನ್ನು ಮಂಗಳೂರು ಬಾಂಬ್ ಪತ್ತೆ ಪ್ರಕರಣದ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಹೇಳಿಕೆ ನೀಡುತ್ತಿದ್ದಾರೆ. ಆ ಘಟನೆ ಬಗ್ಗೆ ನನಗೆ ಅನುಮಾನ ಇದೆ. ಘಟನೆ ಕುರಿತು ಸಂಪೂರ್ಣ ಮಾಹಿತಿಯೊಂದಿಗೆ ಸದನದಲ್ಲಿ ಎಲ್ಲವನ್ನೂ ಮಂಡಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಮಧು ಬಂಗಾರಪ್ಪ, ರಮೇಶ್ ಬಾಬು ಜೆಡಿಎಸ್ ತೊರೆಯುವ ವಿಚಾರ ಕುರಿತು ಮಾತನಾಡಿದ ಅವರು, ಬರುವವರು ಬರುತ್ತಾರೆ, ಹೋಗುವವರು ಹೋಗುತ್ತಾರೆ. ಬಂದು ಹೋಗುವವರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ