
ಪ್ರಗತಿವಾಹಿನಿ ಸುದ್ದಿ: ಪ್ರೀತಿ ನಿರಾಕರಿಸಿದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಮೇಲೆ ಶಾಲೆಗೆ ನುಗ್ಗಿ ಗರಗಸದಿಂದ ದಾಳಿ ನಡೆಸಿದ್ದ ಆರೋಪಿ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದಾರೆ.
ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಹೇಮಂತ್ ಪತ್ತೆಗಾಗಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿದ್ದರು. ಆತ್ಮಕೂರ್ ಅರಣ್ಯ ಪ್ರದೇಶದಲ್ಲಿ ಆರೋಪಿ ಇರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸಲು ತೆರಳಿದ್ದರು. ಈ ವೇಳೆ ಹೇಮಂತ್ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ.
ವರದಿಗಳ ಪ್ರಕಾರ ಆರು ಸುತ್ತು ಗುಂಡು ಹಾರಿಸಲಾಗಿದೆ. ಗಾಯಗೊಂಡ ಆರೋಪಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಶಾಲೆಯ ತರಗತಿಯೊಳಗೆ ನುಗ್ಗಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿ ಗರಗಸದಿಂದ ಕತ್ತು ಸೀಳಿದ್ದ. ತಪ್ಪಿಸಲು ಬಂದ ಇನ್ನೋರ್ವ ವಿದ್ಯಾರ್ಥಿನಿ ಮೇಲೂ ಹಲ್ಲೆ ನಡೆಸಿದ್ದ. ಕೃತ್ಯದ ಬಳಿಕ ಆರೋಪಿ ಪರಾರಿಯಾಗಿದ್ದ. ಇದೀಗ ಆರೋಪಿ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಆರೋಪಿ ಹೇಮಂತ್ ಮದುವೆಯಾಗುವಂತೆ ವಿದ್ಯಾರ್ಥಿನಿಗೆ ಒತ್ತಾಯಿಸಿದ್ದ ಎನ್ನಲಾಗಿದೆ. ಆಕೆ ಪ್ರಸ್ತಾಪವನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಶಾಲೆಗೆ ನುಗ್ಗಿ ಗರಗಸದಿಂದ ಹಲ್ಲೆ ನಡೆಸಿದ್ದಾನೆ ಎಂಬ ಆರೋಪವಿದೆ. ಸದ್ಯ ಗಾಯಾಳು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಂಭೀರ ಗಾಯಾಳು ವಿದ್ಯಾರ್ಥಿನಿ ಬೆಂಗಳೂರಿಗೆ ಶಿಫ್ಟ್:
ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ ವಿದ್ಯಾರ್ಥಿನಿಗೆ ಆರಂಭದಲ್ಲಿ ಅನಂತಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರ ತಂಡದೊಂದಿಗೆ ವಿಶೇಷ ವ್ಯವಸ್ಥೆ ಮೂಲಕ ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಆಂಧ್ರಪ್ರದೇಶದ ಆರೋಗ್ಯ ಸಚಿವ ಸತ್ಯಕುಮಾರ್ ಯಾದವ್ ತಿಳಿಸಿದ್ದಾರೆ.
ವಿದ್ಯಾರ್ಥಿನಿಯ ಬಲಗೈಗೆ ತೀವ್ರ ಹಾನಿಯಾಗಿದ್ದು, ಮುಖ, ಕುತ್ತಿಗೆ, ತಲೆ ಮತ್ತು ಭುಜದ ಭಾಗಗಳಲ್ಲೂ ಗಂಭೀರ ಗಾಯಗಳಾಗಿವೆ. ಹಲವು ಮೂಳೆ ಮುರಿತಗಳು ಹಾಗೂ ರಕ್ತನಾಳಗಳಿಗೆ ಹಾನಿಯಾಗಿರುವುದಾಗಿ ಆಸ್ಪತ್ರೆಯ ವೈದ್ಯಕೀಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.




