ರಾಜ್ಯಾದ್ಯಂತ ಪ್ಯಾಕೇಜ್ಡ್ ಕುಡಿಯುವ ನೀರಿನ ಘಟಕಗಳ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಒಟ್ಟು 45 ಘಟಕಗಳನ್ನು ತಪಾಸಣೆ ಮಾಡಲಾಗಿದ್ದು, ದಾಳಿ ವೇಳೆ, ಹಲವು ಘಟಕಗಳಲ್ಲಿ ಗಂಭೀರ ಲೋಪದೋಷಗಳು ಪತ್ತೆಯಾಗಿವೆ.
ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸಿದ 24 ಘಟಕಗಳಿಗೆ ನೋಟಿಸ್ ನೀಡಲಾಗಿದೆ. ಸಿಬ್ಬಂದಿಗೆ ವೈದ್ಯಕೀಯ ಪ್ರಮಾಣಪತ್ರ ಇಲ್ಲದಿರುವುದು, ನೀರಿನ ಬಾಟಲಿಗಳ ಲೇಬಲ್ನಲ್ಲಿ ಸರಿಯಾದ ಮಾಹಿತಿ ಇಲ್ಲದಿರುವುದು ಮತ್ತು ಕೀಟ ನಿಯಂತ್ರಣ ಪ್ರಮಾಣಪತ್ರ ಇಲ್ಲದಿರುವುದು ಮುಖ್ಯವಾಗಿ ಕಂಡುಬಂದಿದೆ.
ಹೆಚ್ಚುವರಿಯಾಗಿ, 32 ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಸ್ವಚ್ಛತೆ ಇಲ್ಲದ ಒಂದು ನೀರಿನ ಘಟಕವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಮೈಸೂರು ಮತ್ತು ದಾವಣಗೆರೆಯಲ್ಲೂ ತಪ್ಪು ಲೇಬಲ್ ಹೊಂದಿರುವ ನೀರಿನ ಬಾಟಲಿಗಳನ್ನು ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ ಕಂಡುಬಂದ ಲೋಪದೋಷಗಳ ಹಿನ್ನೆಲೆಯಲ್ಲಿ ಒಂದು ಘಟಕವನ್ನು ಸೀಜ್ ಮಾಡಲಾಗಿದ್ದು, ಉಳಿದ ಘಟಕಗಳಿಗೆ ಅಗತ್ಯ ಸುಧಾರಣೆಗಳನ್ನು ಕೈಗೊಳ್ಳಲು ನೋಟಿಸ್ ಜಾರಿ ಮಾಡಲಾಗಿದೆ.
ನೀರಿನ ಘಟಕಗಳ ಮೇಲೆ ದಾಳಿ ಕುಡಿಯುವ ನೀರಿನ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




