Belagavi NewsBelgaum NewsEducationKannada NewsKarnataka News

*ಪ್ರಜಾಸತ್ತಾತ್ಮಕತೆ ಭಾಷಣದ ಭಾಗವಾಗದೆ ವರ್ತಮಾನದ ವಿದ್ಯಮಾನವಾಗಬೇಕು:  ಡಾ. ನಟರಾಜ್ ಬೂದಾಳು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ನಮ್ಮ ಪೀಳಿಗೆಗೆ ಅಕ್ಷರ ಭಾಗ್ಯ ಸಿಕ್ಕಿದ್ದು ಪ್ರಜಾಸತ್ತಾತ್ಮಕತೆಯಿಂದ. ಇದು ಮನುಷ್ಯನ ಈವರೆಗಿನ ಅತ್ಯುತ್ತಮ ಆವಿಷ್ಕಾರ. ಪ್ರಜಾಸತಾತ್ಮಕತೆ ಕೇವಲ ಭಾಷಣದ ಭಾಗವಾಗದೆ ವರ್ತಮಾನದ ವಿದ್ಯಮಾನವಾಗಬೇಕು” ಎಂದು ಸಂಸ್ಕೃತಿ ಚಿಂತಕರು, ಸಾಹಿತಿಗಳು ಮತ್ತು ವಿಮರ್ಶಕ ಡಾ ನಟರಾಜ್ ಬೂದಾಳು ಅಭಿಪ್ರಾಯಪಟ್ಟರು. 

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಪೀಠ ಹಾಗೂ ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ತರಬೇತಿ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಸಹಯೋಗದೊಂದಿಗೆ ಕುವೆಂಪು ಸಭಾಭವನದಲ್ಲಿ ಬುಧವಾರದಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ʼಧಮ್ಮ-ದಯೆ-ಸಮತೆ: ಪ್ರಜಾಸತಾತ್ಮಕ ನೆಲೆಯಲ್ಲಿ ಬುದ್ಧ-ಬಸವ-ಅಂಬೇಡ್ಕರ್ ಅವರ ಚಿಂತನೆಗಳ ಸಂಗಮ ಮತ್ತು ಪ್ರಸ್ತುತತೆʼ ವಿಷಯದ ಮೇಲೆ ಮಾತನಾಡಿದ ಅವರು, “ಬುದ್ಧನನ್ನು ಕೇವಲ  ಧರ್ಮ ಸಂಸ್ಥಾಪಕನಾಗಿ ನೋಡದೆ ಈ ಲೋಕವು ಹೇಗಿದೆಯೋ ಹಾಗೆ ನೋಡಬೇಕು ಎಂದು ತೋರಿಸಿಕೊಟ್ಟ ವಿಜ್ಞಾನಿಯನ್ನಾಗಿ ಕಾಣಬೇಕು ಮತ್ತು ಅವರ ತತ್ತ್ವಗಳನ್ನ ಜೀವನದ ಸಂವಿಧಾನವನ್ನಾಗಿ ಅಳವಡಿಸಿಕೊಳ್ಳಬೇಕು” ಎಂದು ಹೇಳಿದರು. 

“ಬುದ್ಧ ಬಸವ ಅಂಬೇಡ್ಕರ್ ಅವರ ಚಿಂತನೆಗಳನ್ನು ಕೇವಲ ಜಯಂತಿ ಭಾಷಣ ಮತ್ತು ಹೆಸರಿಗಷ್ಟೇ ಸೀಮಿತಗೊಳಿಸದೆ ಅವರ ಬದುಕಿನ ತಾತ್ವಿಕತೆಯನ್ನು ನಮ್ಮ ಬದುಕಿನುದ್ದಕ್ಕೂ ಅನುಸರಿಸಬೇಕು” ಎಂದು ಹೇಳಿದರು. 

Home add -Advt

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕುಲಪತಿ ಪ್ರೊ ಸಿ ಎಂ ತ್ಯಾಗರಾಜ್ ಮಾತನಾಡಿ “ಬುದ್ಧ ಬಸವ ಅಂಬೇಡ್ಕರ್ ಅವರ ಚಿಂತನೆಗಳ ಅಡಿಪಾಯ ನಮ್ಮ ಜೀವನಕ್ಕೆ ಆಧಾರ. ಈ ಮೂವರು ಮಹನೀಯರು ಸಾಮಾಜಿಕ ವಿಜ್ಞಾನಿಗಳು ಮತ್ತು ಸಾಮಾಜಿಕ ದಾರ್ಶನಿಕರಾಗಿ, ವಸ್ತುಗಳ ರೂಪದಲ್ಲಿ ಕೊಡುಗೆ ನೀಡದೆ ಬದುಕು ಬದಲಿಸುವ ತಾತ್ವಿಕತೆಯನ್ನು ಕೊಡುಗೆಯಾಗಿ ನೀಡಿದ್ದಾರೆ” ಎಂದು ಹೇಳಿದರು. ಕುಲಸಚಿವ ಸಂತೋಷ ಕಾಮಗೌಡ ಮಾತನಾಡಿ “ಬುದ್ಧ ಮತ್ತು ಬಸವಣ್ಣನವರ ಆಶಯಗಳನ್ನು ಅಂಬೇಡ್ಕರ್ ಅವರ ಮೂಲಕ ನಾವು ಸಂವಿಧಾನದಲ್ಲಿ ಓದಬಹುದು” ಎಂದು ತಿಳಿಸಿದರು.

ಲತಾರಾಣಿಯವರು “ಇಂದಿನ ಯುವಜನರು ಸಧೃಡ ದೇಹ ಮತ್ತು ಸ್ವಸ್ಥ ಮನಸ್ಸನ್ನು ಬೆಳಸಿಕೊಳ್ಳುವತ್ತ ಗಮನ ಹರಿಸಬೇಕು” ಎಂದು ಹೇಳಿದರು. 

ಅಂಬೇಡ್ಕರ್ ಅಧ್ಯಯನ ಪೀಠದ ನಿರ್ದೇಶಕರಾದ ಡಾ. ಅಶೋಕ್ ಡಿಸೋಜಾ ಪ್ರಾಸ್ತಾವಿಕವಾಗಿ ಮಾತನಾಡಿ ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಸಂಯೋಜಕರಾದ ಡಾ ಮಹೇಶ್ ಕುಮಾರ್ ಎನ್, ಡಾ ಅಶ್ವಿನಿ ಜಾಮೂನಿ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Related Articles

Back to top button