
2022 ಆದೇಶ ವಾಪಸ್: ಗೊಂದಲ ಸೃಷ್ಟಿಸಿದ ಸರ್ಕಾರದ ಕ್ರಮ
ಪ್ರಗತಿವಾಹಿನಿ ಸುದ್ದಿ: ಶಾಲಾ-ಕಾಲೇಜುಗಳ ಸಮವಸ್ತ್ರದ ಬಗ್ಗೆ 2022ರ ಆದೇಶವನ್ನು ಹಿಂಪಡೆದ ರಾಜ್ಯ ಸರ್ಕಾರ ಸಮವಸ್ತ್ರದ ಬಗ್ಗೆ ಹೊಸ ಆದೇಶ ಹೊರಡಿಸಿದೆ. ಈ ಆದೇಶ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿದೆ.
ಶಾಲಾ ಸಮವಸ್ತ್ರದಲ್ಲಿ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಧರಿಸುವ ಪೇಟ/ಟರ್ಬನ್, ಜನಿವಾರ/ಪವಿತ್ರ ದಾರ, ಶಿವದಾರ, ರುದ್ರಾಕ್ಷಿ ತಲೆವಸ್ತ್ರ/ಹಿಜಬ್ ನಂತಹ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತ ವಸ್ತ್ರಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಕೇಸರಿ ಶಾಲು, ಕುಂಕುಮ, ತಿಲಕದ ವಿಚಾರವಾಗಿ ಯಾವುದೇ ಉಲ್ಲೇಖ ಮಾಡಿಲ್ಲ.
ಆದೇಶದಲ್ಲಿ ಹಿಜಾಬ್ ಗೆ ಅವಕಾಶ ನೀಡಲಾಗಿದೆ ಆದರೆ ಕೇಸರಿ ಶಾಲು, ಸಿಂಧೂರ, ಕುಂಕುಮ, ವಿಭೂತಿ, ತಿಲಕದ ವಿಚಾರವಾಗಿ ಯಾವುದೇ ಸ್ಪಷ್ಟನೆ ನೀಡಿಲ್ಲದಿರುವುದು ಹೊಸ ವಿವಾದ ಸೃಷ್ಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಿಕ್ಷಣ ಇಲಾಖೆಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರ ಮಾಡಿದ್ದೇವೆ. ಜನಿವಾರ ಘಟನೆ ಇತ್ತೀಚೆಗೆ ಆಗಿತ್ತು. ಇದರಿಂದ ಮಕ್ಕಳಿಗೆ ಸಮಸ್ಯೆ ಆಗ್ತಿತ್ತು. ಮಾನಸಿಕ ಹಿಂಸೆ ಆಗ್ತಿತ್ತು. ಆದ್ದರಿಂದ ಧಾರ್ಮಿಕ ವಸ್ತ್ರಗಳಿಗೆ ಶಾಲಾ-ಕಾಲೇಜುಗಳಿಗೆ ಅವಕಾಶ ನೀಡಲಾಗಿದೆ. ಜನಿವಾರ, ಶಿವಧಾರ ಸೇರಿ ಧಾರ್ಮಿಕ ವಸ್ತುಗಳಿಗೆ ಅವಕಾಶ ನೀಡಲಾಗಿದೆ. 1-12ನೇ ತರಗತಿವರೆಗೂ ಇದು ಅನ್ವಯವಾಗಲಿದೆ. ಎಲ್ಲಾ ಧರ್ಮದ ಧಾರ್ಮಿಕ, ಸಂಪ್ರದಾಯದ ವಸ್ತುಗಳಿಗೂ ಅವಕಾಶ ಕೊಡಲಾಗಿದೆ ಎಂದು ತಿಳಿಸಿದರು.
ಸರ್ಕಾರದ ಹೊಸ ಆದೇಶ:
- ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಪದವಿಪೂರ್ವ ಕಾಲೇಜುಗಳು, ಸಂಸ್ಥೆಯ ಅಗತ್ಯಗಳು ಮತ್ತು ಸರ್ಕಾರದ ನಿರ್ದೇಶನಗಳಿಗೆ ಅನುಗುಣವಾಗಿ ನಿಯಮಾನುಸಾರ ಸಮವಸ್ತ್ರವನ್ನ ನಿಗದಿಪಡಿಸಿ ಕಡ್ಡಾಯಗೊಳಿಸುವುದನ್ನ ಮುಂದುವರಿಸತಕ್ಕದ್ದು.
- ವಿದ್ಯಾರ್ಥಿಗಳು ನಿಗದಿಪಡಿಸಲಾದ ಸಮವಸ್ತ್ರದೊಂದಿಗೆ ಸೀಮಿತ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳನ್ನ ಧರಿಸಲು ಅನುಮತಿಸಲಾಗಿದೆ. ಆದರೆ, ಇಂತಹ ಸಾಂಪ್ರದಾಯಿಕ ಹಾಗೂ ಪದ್ದತಿ ಆಧಾರಿತವಾದ ಸಂಕೇತಗಳು ಸಮವಸ್ತ್ರಕ್ಕೆ ಪೂರಕವಾಗಿರಬೇಕು ಮತ್ತು ನಿಗದಿತ ಸಮವಸ್ತ್ರವನ್ನ ಬದಲಿಸುವ, ಮೂಲ ಉದ್ದೇಶವನ್ನ ಮಾರ್ಪಡಿಸುವ ಅಥವಾ ವಿಫಲಗೊಳಿಸುವಂತಿರಬಾರದು.
- ಇಂತಹ ಅನುಮತಿಸಬಹುದಾದ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳು ವಿದ್ಯಾರ್ಥಿಗಳು ಸಾಮಾನ್ಯವಾಗಿ ಧರಿಸುವ ಪೇಟಿ/ಟರ್ಬನ್, ಜನಿವಾರ/ಪವಿತ್ರ ದಾರ, ಶಿವದಾರ, ರುದ್ರಾಕ್ಷಿ, ತಲೆವಸ್ತ್ರ/ಹಿಜಾಬ್ ಅಥವಾ ಇತರೆ ಯಾವುದೇ ಸಮಾನ ಸ್ವರೂಪದ ಸಾಂಪ್ರದಾಯಿಕ ಹಾಗೂ ಪದ್ದತಿ ಆಧಾರಿತವಾದ ಸಂಕೇತಗಳು ಸೇರಿರಬಹುದು. ಆದರೆ, ಇವು ಶಿಸ್ತು, ಸುರಕ್ಷತೆ ಮತ್ತು ವಿದ್ಯಾರ್ಥಿಯ ಗುರುತಿಸುವಿಕೆಗೆ ಅಡ್ಡಿಯಾಗಬಾರದು.
- ನಿಗದಿತ ಸಮವಸ್ತ್ರದೊಂದಿಗೆ ಇಂತಹ ಸೀಮಿತ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳು ಧರಿಸಿರುವ ಕಾರಣಕ್ಕಾಗಿ ಯಾವುದೇ ವಿದ್ಯಾರ್ಥಿಗೆ ಶಿಕ್ಷಣ ಸಂಸ್ಥೆ ತರಗತಿ ಪರೀಕ್ಷಾ ಕೊಠಡಿ ಅಥವಾ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರವೇಶವನ್ನು ನಿರಾಕರಿಸುವಂತಿಲ್ಲ.
- ಇಂತಹ ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳನ್ನು ಧರಿಸುವಂತೆ ಯಾವುದೇ ವಿದ್ಯಾರ್ಥಿಯನ್ನು ಒತ್ತಾಯಿಸುವಂತಿಲ್ಲ. ಅದೇ ರೀತಿ ಸರ್ಕಾರವು ಅನುಮತಿಸಿರುವ ಸೀಮಿತ ಸಾಂಪ್ರದಾಯಿಕ ಹಾಗೂ ಪದ್ಮತಿ ಆಧಾರಿತವಾದ ಸಂಕೇತಗಳನ್ನು ಬಲವಂತವಾಗಿ ತೆಗೆಯುವಂತೆಯೂ ಒತ್ತಾಯಿಸುವಂತಿಲ್ಲ. ಆದರೆ, ಪರೀಕ್ಷಾ ಸಂದರ್ಭಗಳಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ವಸ್ತ್ರ, ಸಂಹಿತೆಯ ನಿಯಮಗಳನ್ನು ಸಂದರ್ಭೋಚಿತವಾಗಿ ಸಂಬಂಧಿಸಿದ ಪ್ರಾಧಿಕಾರಗಳು ಅಳವಡಿಸಿಕೊಳ್ಳತಕ್ಕದ್ದು.
- ಈ ಆದೇಶದ ಅನುಷ್ಠಾನವು ಏಕರೂಪವಾಗಿರಬೇಕು. ಧಾರ್ಮಿಕ, ಸಾಂಪ್ರದಾಯಿಕ ನಿಷ್ಪಕ್ಷಪಾತತೆಯಿಂದ ಕೂಡಿರಬೇಕು ಮತ್ತು ತಾರತಮ್ಮರಹಿತವಾಗಿರಬೇಕು.
- ಈ ಆದೇಶದ ಅನುಷ್ಠಾನವು ಏಕರೂಪವಾಗಿರಬೇಕು. ಧಾರ್ಮಿಕ, ಸಾಂಪ್ರದಾಯಿಕ ವಿಕ್ಷವಾತತೆಯಿಂದ ಕೂಡಿರಬೇಕು ಮತ್ತು ತಾರತಮ್ಮರಹಿತವಾಗಿರಬೇಕು.
- ಸಮಾನತೆ, ಘನತೆ, ಭಾತೃತ್ವ, ಜಾತ್ಯತೀತತೆ, ವೈಜ್ಞಾನಿಕತೆ, ವೈಚಾರಿಕತೆ ಮತ್ತು ಶಿಕ್ಷಣದ ಹಕ್ಕು ಎಂಬ ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿರತಕ್ಕದ್ದು.




