
ಪ್ರಗತಿವಾಹಿನಿ ಸುದ್ದಿ: ಕೇಂದ್ರ ಚುನಾವಣಾ ಆಯೋಗವು ಮೂರನೇ ಹಂತದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮೇ 20ರಿಂದ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಕರ್ನಾಟಕ ಸೇರಿದಂತೆ 16 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ನಡೆಯಲಿದೆ.
ಮತದಾರರ ಪಟ್ಟಿಯ ಶುದ್ಧೀಕರಣದ ಗುರಿಯನ್ನು ಹೊಂದಿರುವ ಎಸ್ ಐಆರ್, ಕರ್ನಾಟಕ, ಒಡಿಶಾ, ಮಿಜೋರಾಂ, ಮಣಿಪುರ, ಸಿಕ್ಕೀಂ, ಉತ್ತರಾಖಂಡ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಹರಿಯಾಣ, ಚಂಡೀಗಢ, ತೆಲಂಗಾಣ, ಪಂಜಾಬ್, ಮೇಘಾಲಯ, ಮಹಾರಾಷ್ಟ್ರ, ಜಾರ್ಖಂಡ್, ದೆಹಲಿ, ನಾಗಾಲ್ಯಾಂಡ್ ಮತ್ತು ತ್ರಿಪುರದಲ್ಲಿ ನಡೆಯಲಿದೆ.
ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ಗೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವೇಳಾಪಟ್ಟಿಯನ್ನು ಚುನಾವಣಾ ಸಮಿತಿಯು ಮುಂದಿನ ದಿನಗಳಲ್ಲಿ ಪ್ರಕಟಿಸಲಿದೆ.
ಎಲ್ಲಾ 16 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಂತ ಹಂತವಾಗಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ನಡೆಸಲಾಗುವುದು. ಈ ನಿಟ್ಟಿನಲ್ಲಿ ಆಯಾ ಮುಖ್ಯ ಚುನಾವಣಾ ಅಧಿಕಾರಿಗೆ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಆಯೋಗ ತಿಳಿಸಿದೆ.
ದೇಶದಲ್ಲಿ ಜನಗಣತಿಯ ಹಿನ್ನೆಲೆಯಲ್ಲಿ, ಮನೆ ಪಟ್ಟಿ ಪ್ರಕ್ರಿಯೆ ನಡೆಯುತ್ತಿರುವುದರಿಂದ ಅದನ್ನು ಗಮನದಲ್ಲಿಟ್ಟುಕೊಂಡು ಎಸ್ ಐಆರ್ ಹಂತ-IIIರ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ.



