*ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತಿಗೆ ಸೈ ಎಂದ ಕನ್ನಡಪರ ಸಂಘಟನೆಗಳು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸಬೇಕು ಎಂದು ಆಗ್ರಹಿಸಿ ಮಾರ್ಚ್ 26 ರಿಂದ ಹೋರಾಟ ನಡೆಸುತ್ತಿರುವ ಕನ್ನಡ ಸಂಘಟನೆಗಳನ್ನು ಹಾಗೂ ಪಾಲಿಕೆಯ ಮಹಾಪೌರರು ಮತ್ತು ಉಪ ಮಹಾಪೌರರನ್ನು ಇದೇ ಶುಕ್ರವಾರ ಮೇ 22 ರಂದು ಚರ್ಚೆಗೆ ಕರೆಯುವುದಾಗಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಿನ್ನೆ ಮಂಗಳವಾರ ಗೋಕಾಕದ ಕನ್ನಡ ಸಂಘಟನೆಗಳಿಗೆ ನೀಡಿದ ಭರವಸೆಯನ್ನು ಬುಧವಾರ ಮುಂಜಾನೆ ಸಭೆ ಸೇರಿದ್ದ ಕನ್ನಡ ಸಂಘಟನೆಗಳು ಸ್ವಾಗತಿಸಿವೆ.
ಈಗಾಗಲೇ ಪಾಲಿಕೆಯ ಗೊತ್ತುವಳಿ ಸ್ವೀಕರಿಸುವ ಬಗ್ಗೆ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸುದೀರ್ಘ ಪತ್ರ ಬರೆದು ಗೊತ್ತುವಳಿ ಪಾಸು ಮಾಡುವ ಅವಶ್ಯಕತೆಯನ್ನು ವಿವರಿಸಲಾಗಿದೆ.
ಇಂದಿನ ಸಭೆಯಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ, ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಮಹಾದೇವ ತಳವಾರ, ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಜಿಲ್ಲಾಧ್ಯಕ್ಷ ವಾಜಿದ್ ಹಿರೆಕೋಡಿ, ಗಡಿನಾಡು ಕನ್ನಡ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ, ಸರ್ವೋದಯ ಸಂಘದ ಅಧ್ಯಕ್ಷ ಶ್ರೀನಿವಾಸ ತಾಳುಕರ, ಆನಂದ ಬಿಲಾ ವರ, ಶರೀಫ್ ಸನದಿ, ಜಯಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಸಿದ್ದಲಿಂಗಪ್ಪ ಸುಣಕುಪ್ಪಿ, ಕರ್ನಾಟಕ ರಕ್ಷಣಾ ವೇದಿಕೆಯ ಯುವಸೇನೆಯ ಜಿಲ್ಲಾಧ್ಯಕ್ಷ ಬಾಳಪ್ಪ ಗುಡಗೇನಟ್ಟಿ ಉಪಸ್ಥಿತರಿದ್ದರು.


