Karnataka NewsLatestPolitics

*ಡಿ.ಕೆ.ಶಿವಕುಮಾರ್ ಅವರ ಅದೊಂದು ಮಾತು ನನ್ನ ನಿರ್ಧಾರ ಬದಲಿಸಿತು: ರಾಜೀನಾಮೆ ಹಿಂಪಡೆದ ರಾಮಲಿಂಗಾರೆಡ್ಡಿ*

ಪ್ರಗತಿವಾಹಿನಿ ಸುದ್ದಿ: ನಗರಾಭಿವೃದ್ಧಿ ಖಾತೆ ಸಿಕ್ಕಿಲ್ಲ ಎಂಬ ಕಾರಣಕ್ಕೆ ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ರಾಮಲಿಂಗಾರೆದ್ಡಿ ಅವರ ಮನವೊಲಿಸುವಲ್ಲಿ ನೂತನ ಸಿಎಂ ಡಿ.ಕೆ.ಶಿವಕುಮಾರ್ ಯಶಸ್ವಿಯಾಗಿದ್ದಾರೆ.

ಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಸುದೀರ್ಘ ಚರ್ಚೆ ಹಾಗೂ ಇಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಅವರೊಂದಿಗೆ ಎರಡು ಬಾರಿ ನಡೆದ ಮಾತುಕತೆ ಬಳಿಕ ರಾಮಲಿಂಗಾರೆಡ್ಡಿ ರಾಜೀನಾಮೆ ವಾಪಸ್ ಪಡೆದಿದ್ದಾರೆ. ಸಭೆ ಬಳಿಕ ಮಾತನಾಡಿದ ರಣದೀಪ್ ಸುರ್ಜೇವಾಲ, ರಾಮಲಿಂಗಾರೆಡ್ಡಿ ಹಲವು ಬಾರಿ ಶಾಸಕರಾದವರು. ನಿಷ್ಠಾವಂತ ಕಾಂಗ್ರೆಸ್ ನಾಯಕರು. ಅವರ ಕೊಡುಗೆ ಅಪಾರ. ರಾಮಲಿಂಗಾರೆಡ್ಡಿ ರಾಜೀನಾಮೆ ಹಿಂಪಡೆದಿದ್ದಾರೆ. ಅವರು ಸಂಪುಟದಲ್ಲಿ ಮುಂದುವರೆಯುತ್ತಾರೆ ಎಂದು ತಿಳಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ, ನಿನ್ನೆ ರಾತ್ರಿ ನಾನು ಮತ್ತು ಮುಖ್ಯಮಂತ್ರಿಗಳು ಭೇಟಿಯಾಗಿ ಮಾತುಕತೆ ನಡೆಸಿದೆವು. ನನ್ನ ರಾಜೀನಾಮೆಯನ್ನು ಯಾವುದೇ ಕಾರಣಕ್ಕೂ ತಗೊಳ್ಳೋದಿಲ್ಲ, ನಾನು ಅದನ್ನು ಸ್ವೀಕರಿಸುವುದಿಲ್ಲ ಎಂದು ಸಿಎಂ ಸ್ಪಷ್ಟವಾಗಿ ಹೇಳಿದರು. ಇನ್ನು ಎರಡು ವರ್ಷ ಕಾಲ ನಮ್ಮ ಜೊತೆ ಇದ್ದು ಕೆಲಸ ಮಾಡಬೇಕು ಎಂದು ಅವರು ಹೇಳಿದ್ದಾರೆ. ಅವರ ಅದೊಂದು ಮಾತು ನನ್ನ ನಿರ್ಧಾರ ಬದಲಿಸಿತು ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿಗಳು ರಾಜೀನಾಮೆಯನ್ನು ಸ್ವೀಕರಿಸದಿರುವುದರಿಂದ ಅದು ತಿರಸ್ಕೃತಗೊಂಡಿದೆ ಎಂದೇ ಅರ್ಥ. ಖಾತೆ ವಿಚಾರದ ಬಗ್ಗೆ ಮುಂದಕ್ಕೆ ಮುಖ್ಯಮಂತ್ರಿಗಳು ಮತ್ತು ವರಿಷ್ಠರು ನೋಡಿಕೊಳ್ಳುತ್ತಾರೆ ಎಂದರು. ಯಾವುದೇ ನಿರ್ದಿಷ್ಟ ಬೇಡಿಕೆಗಳನ್ನು ಇಟ್ಟಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ರಣ್‌ದೀಪ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ಹಿರಿಯ ನಾಯಕರು ತಮ್ಮ ನಿರ್ಧಾರವನ್ನು ವಾಪಸ್ ಪಡೆಯುವಂತೆ ಕರೆ ಮಾಡಿ ಮನವಿ ಮಾಡಿದ್ದರು ಎಂದು ವಿವರಿಸಿದರು.

Home add -Advt

Related Articles

Back to top button