*TMC ಹೆಸರು-ಚಿಹ್ನೆ ಫ್ರೀಜ್: ಮಮತಾ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ*
TMC name and symbol frozen: Supreme Court agrees to urgent hearing of Mamata's plea!

ಪ್ರಗತಿವಾಹಿನಿ ಸುದ್ದಿ: ತೃಣಮೂಲ ಕಾಂಗ್ರೆಸ್ ಪಕ್ಷದ ಹೆಸರು ಹಾಗೂ ಮೀಸಲು ಚುನಾವಣಾ ಚಿಹ್ನೆಯನ್ನು ಬಳಸುವುದಕ್ಕೆ ಚುನಾವಣಾ ಆಯೋಗ ಹೇರಿರುವ ನಿರ್ಬಂಧವನ್ನು ಪ್ರಶ್ನಿಸಿ ಮಾಜಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಲ್ಲಿಸಿರುವ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೊಹನಾ ಅವರನ್ನೊಳಗೊಂಡ ಪೀಠದ ಮುಂದೆ ಹಿರಿಯ ವಕೀಲ ಕಪಿಲ್ ಸಿಬಲ್ ಈ ವಿಷಯ ಪ್ರಸ್ತಾಪಿಸಿ, ಅರ್ಜಿಯನ್ನು ಶೀಘ್ರ ವಿಚಾರಣೆಗೆ ಪಟ್ಟಿ ಮಾಡುವಂತೆ ಮನವಿ ಮಾಡಿದರು.
ಮಮತಾ ಬ್ಯಾನರ್ಜಿ ಪರ ವಾದ ಮಂಡಿಸಿದ ಕಪಿಲ್ ಸಿಬಲ್, ಚುನಾವಣಾ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲೇ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಫ್ರೀಜ್ ಮಾಡಿರುವುದನ್ನು ಪ್ರಶ್ನಿಸಿದರು. “ಅವರು ಅಧಿಸೂಚನೆ ಹೊರಡಿಸುತ್ತಾರೆ, ಆದರೆ ಅಧಿಸೂಚನೆ ಜಾರಿಯಲ್ಲಿರುವಾಗಲೇ ಚುನಾವಣಾ ಚಿಹ್ನೆಯನ್ನು ಸ್ಥಗಿತಗೊಳಿಸುತ್ತಾರೆ. ಇಲ್ಲಿ ಏನು ನಡೆಯುತ್ತಿದೆ? ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಪಟ್ಟಿ ಮಾಡಬೇಕು” ಎಂದು ಮನವಿ ಮಾಡಿದರು. ಇದಕ್ಕೆ ಪೀಠವು ಎರಡೂ ಕಡೆಯ ವಾದಗಳನ್ನು ಆಲಿಸಬೇಕಿದೆ ಎಂದು ಸೂಚಿಸಿ, ಪ್ರಕರಣವನ್ನು ಪಟ್ಟಿ ಮಾಡುವುದಾಗಿ ತಿಳಿಸಿತು.
ಪಕ್ಷದ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಎರಡು ಬಣಗಳ ನಡುವೆ ವಿವಾದ ಉಂಟಾದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಸೆಪ್ಟೆಂಬರ್ನಲ್ಲಿ ಮಧ್ಯಂತರ ಆದೇಶ ಹೊರಡಿಸಿತ್ತು. ಅಂತಿಮ ನಿರ್ಧಾರ ಕೈಗೊಳ್ಳುವವರೆಗೆ ಎರಡೂ ಬಣಗಳು ‘ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್’ ಎಂಬ ಹೆಸರು ಹಾಗೂ ಪಕ್ಷದ ಮೀಸಲು ‘ಹೂ ಮತ್ತು ಹುಲ್ಲು’ ಚುನಾವಣಾ ಚಿಹ್ನೆಯನ್ನು ಬಳಸುವುದನ್ನು ಆಯೋಗ ನಿರ್ಬಂಧಿಸಿದೆ.
ಚುನಾವಣಾ ಚಿಹ್ನೆಗಳ ಆದೇಶ, 1968ರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪಕ್ಷದ ಮೇಲಿನ ಹಕ್ಕು ಮತ್ತು ಸಂಘಟನಾ ನಿಯಂತ್ರಣದ ಕುರಿತು ಸಮಗ್ರ ವಿಚಾರಣೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಆಯೋಗ ತಿಳಿಸಿದೆ.
ಮೂಲ ಹೆಸರು ಮತ್ತು ಮೀಸಲು ಚಿಹ್ನೆಯ ಬಳಕೆಗೆ ನಿರ್ಬಂಧ ಹೇರಿದ ಬಳಿಕ, ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಎರಡು ಬಣಗಳಿಗೆ ಪರ್ಯಾಯ ಹೆಸರು ಮತ್ತು ಚಿಹ್ನೆಗಳನ್ನು ಚುನಾವಣಾ ಆಯೋಗ ನೀಡಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಬಣಕ್ಕೆ ‘Mamata All India Trinamool Congress’ ಎಂಬ ಹೆಸರು ಮತ್ತು ‘Football Player’ ಚಿಹ್ನೆ ನೀಡಲಾಗಿದೆ. ಮತ್ತೊಂದು ಬಣಕ್ಕೆ ‘Democratic Trinamool Congress’ ಎಂಬ ಹೆಸರು ಹಾಗೂ ‘Envelope’ ಚಿಹ್ನೆ ನೀಡಲಾಗಿದೆ.
ಚುನಾವಣಾ ಆಯೋಗದ ಮಧ್ಯಂತರ ಆದೇಶದ ವಿರುದ್ಧ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಇದೀಗ ಅರ್ಜಿಯನ್ನು ತುರ್ತಾಗಿ ಪಟ್ಟಿ ಮಾಡಲು ನ್ಯಾಯಾಲಯ ಒಪ್ಪಿರುವುದರಿಂದ ಪ್ರಕರಣದ ಮುಂದಿನ ವಿಚಾರಣೆ ಮಹತ್ವ ಪಡೆದಿದೆ.




