*ಪ್ರತಿಯೊಬ್ಬ ನಟನಿಗೂ ಪ್ರತ್ಯೇಕ ಭದ್ರತೆ ನೀಡುವುದು ಅಸಾಧ್ಯವಾದ ಮಾತು*: *ಅಶೋಕ್ ಪಂಡಿತ್!*

ಪ್ರಗತಿವಾಹಿನಿ ಸುದ್ದಿ: ಬಾಲಿವುಡ್ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ನಡೆದ ಗುಂಡಿನ ದಾಳಿ ಚಿತ್ರರಂಗದಲ್ಲಿ ಆತಂಕ ಮೂಡಿಸಿದೆ. ಘಟನೆಯ ಬಳಿಕ ಪ್ರಮುಖ ನಟರ ಮನೆಗಳ ಸುತ್ತ ಭದ್ರತೆ ಹೆಚ್ಚಿಸಲಾಗಿದೆ. ಆದರೆ ಪ್ರತಿಯೊಬ್ಬ ನಟನಿಗೂ ಪ್ರತ್ಯೇಕವಾಗಿ ಭದ್ರತೆ ಒದಗಿಸುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ ಎಂದು ಫೆಡರೇಷನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ಹೇಳಿದ್ದಾರೆ.
ಘಟನೆ ನಡೆದ ಆರಂಭದಲ್ಲಿ ಚಿತ್ರರಂಗದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಪೊಲೀಸರು ಕೇವಲ ಎರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿರುವುದು ಮಹತ್ವದ ಕ್ರಮವಾಗಿದೆ ಎಂದು ಅಶೋಕ್ ಪಂಡಿತ್ ತಿಳಿಸಿದ್ದಾರೆ. ಸರ್ಕಾರದ ತ್ವರಿತ ಕಾರ್ಯಾಚರಣೆ ಕಲಾವಿದರಲ್ಲಿ ಧೈರ್ಯ ಮತ್ತು ವಿಶ್ವಾಸ ಮೂಡಿಸಿದೆ. ಕಾನೂನಿನ ಭಯ ಇಂತಹ ದುಷ್ಕೃತ್ಯಗಳನ್ನು ತಡೆಯಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಟ ಟೈಗರ್ ಶ್ರಾಫ್ ತಂದೆ ಜಾಕಿ ಶ್ರಾಫ್ ಅವರನ್ನು ಭೇಟಿಯಾಗಿ ಮಾತನಾಡಿರುವುದಾಗಿಯೂ ಅಶೋಕ್ ಪಂಡಿತ್ ತಿಳಿಸಿದ್ದಾರೆ. ದೇವರ ದಯೆಯಿಂದ ಎಲ್ಲವೂ ಸುರಕ್ಷಿತವಾಗಿದೆ ಎಂದು ಜಾಕಿ ಶ್ರಾಫ್ ಸಮಾಧಾನ ವ್ಯಕ್ತಪಡಿಸಿದ್ದು, ಸರ್ಕಾರದ ತ್ವರಿತ ಸ್ಪಂದನೆ ಆತ್ಮವಿಶ್ವಾಸ ನೀಡಿದೆ ಎಂದು ಹೇಳಿದ್ದಾರೆ. ಈ ಘಟನೆಯಿಂದ ಚಿತ್ರರಂಗದ ದೈನಂದಿನ ಚಟುವಟಿಕೆಗಳಿಗೆ ಯಾವುದೇ ಅಡ್ಡಿಯಾಗಿಲ್ಲ ಎಂದು ಅಶೋಕ್ ಪಂಡಿತ್ ಸ್ಪಷ್ಟಪಡಿಸಿದ್ದಾರೆ.
ಕೇವಲ ಸಿನಿಮಾ ನಟರಿಗಷ್ಟೇ ಅಲ್ಲದೆ, ದೇಶದ ಪ್ರತಿಯೊಬ್ಬ ನಾಗರಿಕನ ಸುರಕ್ಷತೆಗೂ ಆದ್ಯತೆ ನೀಡಬೇಕು ಎಂದು ಅಶೋಕ್ ಪಂಡಿತ್ ಹೇಳಿದ್ದಾರೆ. ಪ್ರತಿಯೊಬ್ಬರಿಗೂ ಪ್ರತ್ಯೇಕ ಭದ್ರತೆ ಕಲ್ಪಿಸುವುದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಸಮಾಜದಲ್ಲಿನ ಭಯದ ವಾತಾವರಣವನ್ನು ಹೋಗಲಾಡಿಸಿ, ಜನರ ರಕ್ಷಣೆಗೆ ಪರಿಣಾಮಕಾರಿ ಮತ್ತು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂದು ತಿಳಿಸಿದ್ದಾರೆ.
ಅಕ್ಟೋಬರ್ 18ರಂದು ಮುಂಬೈನ ಜುಹು ಪ್ರದೇಶದಲ್ಲಿ ಟೈಗರ್ ಶ್ರಾಫ್ ಕಾರಿನ ಮೇಲೆ ಮೂವರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ನಟನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಾಲಕ ಮತ್ತು ಸಾರ್ವಜನಿಕರೊಬ್ಬರು ಕೂಡ ಗಾಯಗೊಂಡಿದ್ದರು. ದಾಳಿಯ ಬಳಿಕ ಪರಾರಿಯಾಗಿದ್ದ ಆರೋಪಿಗಳನ್ನು ರಾಜಸ್ಥಾನದ ಕೋಟಾ ರೈಲು ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಮತ್ತು ಆಮಿರ್ ಖಾನ್ ಸೇರಿದಂತೆ ಪ್ರಮುಖ ಬಾಲಿವುಡ್ ನಟರ ಮನೆಗಳ ಸುತ್ತ ಭದ್ರತೆಯನ್ನು ಹೆಚ್ಚಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



