*ಶಾಲೆಗೆ ನುಗ್ಗಿ ಗರಗಸದಿಂದ 10ನೇ ತರಗತಿ ವಿದ್ಯಾರ್ಥಿನಿಯ ಕತ್ತು ಸೀಳಿದ ಪಾಗಲ್ ಪ್ರೇಮಿ*

ಪ್ರಗತಿವಾಹಿನಿ ಸುದ್ದಿ: ಪಾಗಲ್ ಪ್ರೇಮಿಯೊಬ್ಬ ಶಾಲೆಗೆ ನುಗ್ಗಿ ಗರಗಸದಿಂದ ವಿದ್ಯಾರ್ಥಿನಿಯ ಕತ್ತು ಸೀಳಿ ಅಟ್ಟಹಾಸ ಮೆರೆದಿರುವ ಘೋರ ಘಟನೆ ನಡೆದಿದೆ.
ವಿದ್ಯಾರ್ಥಿನಿ ಪ್ರೀತಿ ನಿರಾಕರಿಸಿದ್ದಕ್ಕೆ ಶಾಲೆಯಲ್ಲಿ ತರಗತಿ ನಡೆಯುತ್ತಿದ್ದಗಲೇ ಕೊಠಡಿಯೊಳಗೇ ನುಗ್ಗಿದ ಯುವಕ 10ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಹಲ್ಲೆ ನಡೆಸಿ ಮರ ಕತ್ತರಿಸುವ ಗರಗಸದ ಮಷಿನ್ನಿಂದ ಆಕೆಯ ಕುತ್ತಿಗೆ ಸೀಳಲು ಯತ್ನಿಸಿದ್ದಾನೆ. ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿನಿ ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದ್ದಾಳೆ.
ಸಹಪಾಠಿಗಳು, ಶಿಕ್ಷಕರ ಕಣ್ಮುಂದೆಯೇ ನಡೆದ ಈ ಘಟನೆ ಕಂಡು ಇಡೀ ಶಾಲೆ ಬೆಚ್ಚಿ ಬಿದ್ದಿದೆ. ಹಲ್ಲೆ ತಪ್ಪಿಸಲು ಬಂದ ಇನ್ನೋರ್ವ ವಿದ್ಯಾರ್ಥಿ ಕೂಡ ಗಂಭೀರವಗೈ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವಿದ್ಯಾರ್ಥಿನಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಪ್ತಾಡು ಮಂಡಲದ ಸರ್ಕಾರಿ ಪ್ರೌಢಶಾಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ತರಗತಿ ಕೊಠಡಿಯೊಳಗೇ ನುಗ್ಗಿದ ಯುವಕನೊಬ್ಬ ತನ್ನ ಪ್ರೀತಿಯನ್ನು ನಿರಾಕರಿಸಿದ 10ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಮರ ಕತ್ತರಿಸುವ ಗರಗಸದದಿಂದ ಹಲ್ಲೆ ನಡೆಸಿ ಕತ್ತು ಸೀಳಿದ್ದಾನೆ.
ದಾಳಿಯಲ್ಲಿ ಬಾಲಕಿಯ ಕುತ್ತಿಗೆ, ಮುಖ ಹಾಗೂ ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಆಕೆ ಕುಸಿದುಬಿದ್ದಿದ್ದಾಳೆ. ಕೃತ್ಯ ಎಸಗಿದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ವಿಷಯ ತಿಳಿದು ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಧರ್ಮವೃಂದ ರೈಲ್ವೆ ನಿಲ್ದಾಣದಲ್ಲಿ ಆರೋಪಿ ಯನ್ನು ಬಂಧಿಸಿದ್ದಾರೆ. ಹೇಮಂತ್ ಬಂಧಿತ ಆರೋಪಿ. ಈತ ಸಂತ್ರಸ್ತೆ ವಿದ್ಯಾರ್ಥಿನಿಯ ದೂರದ ಸಂಬಂಧಿಯಾಗಿದ್ದು, ನಾಗಲೂರು ಮೂಲದವನೆಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಆರೋಪಿ ಹೇಮಂತ್ ಕಳೆದ ಕೆಲವು ದಿನಗಳಿಂದ ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ. ತನ್ನಿಂದ ದೂರವಿರುವಂತೆ ಹಾಗೂ ಈ ವಿಷಯವನ್ನು ಹೆತ್ತವರಿಗೆ ತಿಳಿಸುವುದಾಗಿ ವಿದ್ಯಾರ್ಥಿನಿ ಆತನಿಗೆ ಎಚ್ಚರಿಕೆ ನೀಡಿದ್ದಳು. ಇದರಿಂದ ಆಕ್ರೋಶಗೊಂಡ ಆರೋಪಿ, ಶಾಲೆಗೆ ನುಗ್ಗಿ ಈ ಕೃತ್ಯವೆಸಗಿದ್ದಾನೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.




