*ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿ: ನಮ್ಮ ರೈತರ ಜಮೀನುಗಳಿಗೆ ನೀರು ಹರಿಸಿ; ಇಲ್ಲವಾದಲ್ಲಿ KRSಗೆ ಮುತ್ತಿಗೆ ಹಾಕಿ ಉಗ್ರ ಹೋರಾಟ: ಸರ್ಕಾರಕ್ಕೆ ಆರ್.ಅಶೋಕ್ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ: ರೈತರ ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ತಮಿಳುನಾಡಿಗೆ ಕಾವೇರಿ ನೀರು ಧಾರೆ ಎರೆಯುತ್ತಿರುವ ನಿಮ್ಮ ನಾಡದ್ರೋಹಿ ಕಾಂಗ್ರೆಸ್ ಸರ್ಕಾರಕ್ಕೆ ರೈತರೇ ತಕ್ಕ ಪಾಠ ಕಲಿಸಲಿದ್ದಾರೆ! ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಕಾವೇರಿ ಜಲಾನಯನ ಪ್ರದೇಶದ ನಮ್ಮ ಅನ್ನದಾತರು ನಡುನೀರಿನಲ್ಲಿ ನಿಂತು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಆಕ್ರೋಶದ ಕಣ್ಣೀರು ಹಾಕುತ್ತಿದ್ದಾರೆ. ರಾಜ್ಯದಲ್ಲಿ ಮಳೆ ಇಲ್ಲದೆ ಕೆರೆಗಳು ಒಣಗುತ್ತಿವೆ, ನಾಲೆಗಳು ಬತ್ತುತ್ತಿವೆ, ರೈತರ ಜಮೀನುಗಳು ಒಣಗಿ ಕರಕಲಾಗುತ್ತಿವೆ. ಇಂತಹ ಭೀಕರ ಪರಿಸ್ಥಿತಿಯಲ್ಲೂ ಕಾಂಗ್ರೆಸ್ ಸರ್ಕಾರ ಮಾತ್ರ ತನ್ನ ರಾಜಕೀಯ ಲಾಭಕ್ಕಾಗಿ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸುತ್ತಿರುವುದು ರೈತರಿಗೆ ಮಾಡುತ್ತಿರುವ ಮಹಾದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಡಿ.ಕೆ.ಶಿವಕುಮಾರ್ ಅವರೇ, ನಮ್ಮ ಆಗ್ರಹಗಳನ್ನು ಸ್ಪಷ್ಟವಾಗಿ ಕೇಳಿಸಿಕೊಳ್ಳಿ.
*ಕೂಡಲೇ ಐಸಿಸಿ (ICC) ಸಭೆ ನಡೆಸಿ: ನೀರಾವರಿ ಸಲಹಾ ಸಮಿತಿ ಸಭೆಯನ್ನು ತಕ್ಷಣವೇ ಕರೆದು, ನಮ್ಮ ರಾಜ್ಯದ ಜಲಾಶಯಗಳ ನೈಜ ಸ್ಥಿತಿಯನ್ನು ಪರಿಶೀಲಿಸಿ ರೈತರಿಗೆ ಧೈರ್ಯ ತುಂಬಬೇಕು.
*ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿ: ಕದ್ದುಮುಚ್ಚಿ ನೆರೆ ರಾಜ್ಯಕ್ಕೆ ನೀರು ಹರಿಸುವ ನಿಮ್ಮ ರಹಸ್ಯ ಒಪ್ಪಂದವನ್ನು ತಕ್ಷಣವೇ ಕೈಬಿಟ್ಟು, ಕಾವೇರಿ ಗೇಟ್ಗಳನ್ನು ಬಂದ್ ಮಾಡಿ.
*ಕೆರೆ-ನಾಲೆಗಳಿಗೆ ನೀರು ಬಿಡಿ: ನಮ್ಮ ಹಳ್ಳಿಗಳ ಕೆರೆಗಳಿಗೆ ಮತ್ತು ನಾಲೆಗಳಿಗೆ ತಕ್ಷಣ ನೀರು ಬಿಟ್ಟು, ರೈತರ ಜಮೀನುಗಳಿಗೆ ಮತ್ತು ಬೆಳೆಗಳಿಗೆ ನೀರು ಒದಗಿಸುವ ಕೆಲಸವಾಗಬೇಕು.
ಕನ್ನಡಿಗರ ತಾಳ್ಮೆ ಪರೀಕ್ಷಿಸಬೇಡಿ, ಮುಖ್ಯಮಂತ್ರಿಗಳೇ, ಒಮ್ಮೆ ಮಂಡ್ಯದ ನದಿಯೊಳಗೆ ಇಳಿದು ಹೋರಾಡುತ್ತಿರುವ ರೈತರ ಆಕ್ರೋಶವನ್ನು ಕಣ್ಣು ಬಿಟ್ಟು ನೋಡಿ. ನಮ್ಮ ರೈತರಿಗೆ ಕೊಡಲು ನೀರಿಲ್ಲದಿದ್ದರೂ, ನಿಮ್ಮ ಹೈಕಮಾಂಡ್ ನಾಯಕರನ್ನ, ನೆರೆ ರಾಜ್ಯದವರನ್ನು ತೃಪ್ತಿಪಡಿಸಲು ನೀವು ಮುಂದಾಗಿರುವುದು ಇಡೀ ಕರ್ನಾಟಕಕ್ಕೆ ಮಾಡುತ್ತಿರುವ ದ್ರೋಹ. ಸಿಎಂ ಡಿ.ಕೆ. ಶಿವಕುಮಾರ್ ಅವರೇ, ರೈತರ ಹೊಟ್ಟೆಗೆ ಹೊಡೆದು ನೀವು ಯಾರನ್ನು ಉದ್ಧಾರ ಮಾಡಲು ಹೊರಟಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
ನಿಮಗೆ ಕೊನೆಯ ಎಚ್ಚರಿಕೆ, ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ನೀರಾವರಿ ಸಲಹಾ ಸಮಿತಿ (ICC) ಸಭೆ ನಡೆಸಿ ರೈತರ ಜಮೀನುಗಳಿಗೆ ನೀರು ಹರಿಸದಿದ್ದರೆ, ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ. ಇಡೀ ಕಾವೇರಿ ಕೊಳ್ಳದ ಸಾವಿರಾರು ರೈತರನ್ನು ಒಟ್ಟುಗೂಡಿಸಿ ಕೆ ಆರ್ ಎಸ್ (KRS) ಜಲಾಶಯಕ್ಕೆ ಮುತ್ತಿಗೆ ಹಾಕಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.




