
ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರಿಂದ ಬಳ್ಳಾರಿ ಚಲೋ ಬಿಜೆಪಿ ಪಾದಯಾತ್ರೆ ಇಂದು ಎಂಟನೇ ದಿನಕ್ಕೆ ಕಾಲಿಟ್ಟಿದೆ. ಸೆ.೧೦ರಂದು ಬಳ್ಳಾರಿಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಬೃಹತ್ ಸಮಾವೇಶಕ್ಕೆ ಸರ್ಕಾರ ಅನುಮತಿ ನಿರಾಕರಿಸಿದೆ.
ಬಳ್ಳಾರಿಯ ಎಕ್ಸ್ ಮುನಿಸಿಪಲ್ ಶಾಲಾ ಮೈದಾನದಲ್ಲಿ ಬಿಜೆಪಿ ಬೃಹತ್ ಸಮಾವೇಶಕ್ಕೆ ಸಜ್ಜಾಗಿತ್ತು. ಆದರೆ ರಾಜ್ಯ ಸರ್ಕಾರ ಶಾಲಾ ಮೈದಾನ ಸಮಾವೇಶಕ್ಕೆ ಬಳಸಲು ಅನುಮತಿ ನೀಡಿಲ್ಲ.
ಬಳ್ಳಾರಿಯ ಎಕ್ಸ್ ಮುನಿಸಿಪಲ್ ಶಾಲಾ ಮೈದಾನದಲ್ಲಿ ಸೆಪ್ಟೆಂಬರ್ 10 ರಂದು ಮಧ್ಯಾಹ್ನ 3 ರಿಂದ ರಾತ್ರಿ 8 ಗಂಟೆಯವರೆಗೆ ಸಮಾರೋಪ ಸಮಾವೇಶ ನಡೆಸಲು ಅನುಮತಿ ಕೋರಿ ಬಿಜೆಪಿ ಮುಖಂಡರು ಮನವಿ ಸಲ್ಲಿಸಿದ್ದರು. ಆದರೆ ಶಾಲಾ ಶಿಕ್ಷಣ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯು ಮೈದಾನ ನೀಡಲು ಒಪ್ಪಿಗೆ ನೀಡುತ್ತಿಲ್ಲ.
ಸರ್ಕಾರಿ ಶಾಲಾ-ಕಾಲೇಜುಗಳ ಆವರಣ ಹಾಗೂ ಮೈದಾನಗಳನ್ನು ಖಾಸಗಿ ಸಂಸ್ಥೆಗಳು, ಸಂಘಟನೆಗಳ ಕಾರ್ಯಕ್ರಮಗಳಿಗೆ ನೀಡಬಾರದು ಎಂಬ ಸರ್ಕಾರದ ಕಡ್ಡಾಯ ಆದೇಶವನ್ನು ಮುಂದಿಟ್ಟು ಅನುಮತಿ ನಿರಾಕರಿಸುತ್ತಿದೆ.
ಸರ್ಕಾರಿ ಆಸ್ತಿಗಳಾದ ಶಾಲೆ, ಪಿಯು ಕಾಲೇಜುಗಳ ಮೈದಾನ, ಉದ್ಯಾನವನ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಕಾರ್ಯಕ್ರಮಗಳನ್ನು ನಡೆಸಲು ಸರ್ಕಾರದ ಪೂರ್ವಾನುಮತಿ ಕಡ್ಡಾಯವೆಂದು ಕಳೆದ ವರ್ಷದ ಅಕ್ಟೋಬರ್ 18 ರಂದು ಸಚಿವ ಸಂಪುಟ ಸಭೆ ನಿರ್ಧಾರ ಕೈಗೊಂಡು, ಮಾರ್ಗಸೂಚಿ ಹೊರಡಿಸಿತ್ತು.



