Kannada NewsLatest

ಕೌಟುಂಬಿಕ ಕಲಹಕ್ಕೆ ಬೇಸತ್ತು ಮಕ್ಕಳ ಜತೆ ಪತಿ ಆತ್ಮಹತ್ಯೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೌಟುಂಬಿಕ ಕಲಹಕ್ಕೆ ಬೇಸತ್ತು ಪತ್ನಿ ಹಾಗೂ ಮಕ್ಕಳು ಆತ್ಮಹತ್ಯೆಗೆ ಶರಣಾಗು ಘಟನೆ ಸಾಮಾನ್ಯ ದುರಂತ. ಆದರೆ ಪತಿಯೇ ತನ್ನ ಮಕ್ಕಳ ಜತೆಗೂಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಪರೂಪ. ಇಲ್ಲಿ ಪತಿ ಹಾಗೂ ಪತ್ನಿ ನಡುವಿನ ಮನಸ್ತಾಪಕ್ಕೆ ಇಬ್ಬರು ಮಕ್ಕಳೂ ಕೂಡ ಬಲಿಯಾಗಿದ್ದಾರೆ. ಹೌದು. ಕೌಟುಂಬಿಕ ಕಲಹದಿಂದಾಗಿ ಪತ್ನಿ ತನ್ನ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟುಹೋದಳು ಎಂದು ಮನನೊಂದ ವ್ಯಕ್ತಿ ಇಬ್ಬರು ಮಕ್ಕಳಿಗೆ ವಿಷ ನೀಡಿ, ತಾನೂ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಾದಗೂಡು ಗ್ರಾಮದಲ್ಲಿ ನಡೆದಿದೆ.

ತಮ್ಮಣ್ಣ ಗಿಡ್ಡಾಳೆ (35), ಮಕ್ಕಳಾದ ಚಿನ್ನು (2), ನಿರಂಜನ್ (10) ಮೃತ ದುರ್ದೈವಿಗಳು. ಕೌಟುಂಬಿಕ ಕಲಹಕ್ಕೆ ಬೆಸತ್ತ ಪತ್ನಿ ಇಬ್ಬರು ಮಕ್ಕಳನ್ನು ಬಿಟ್ಟು ತವರು ಮನೆಗೆ ಹೋಗಿದ್ದಾಳೆ. ಪತ್ನಿಯನ್ನ ಮನವೊಲಿಸಲು ತಮ್ಮಣ್ಣ ನಿನ್ನೆ ಹೆಂಡತಿಯ ತವರು ಮನೆ ಹುಕ್ಕೇರಿ ತಾಲೂಕಿನ ಕೇಸ್ತಿ ಗ್ರಾಮಕ್ಕೆ ಹೋಗಿದ್ದಾನೆ.

Home add -Advt

ಈ ಸಂದರ್ಭದಲ್ಲಿ ಪತ್ನಿಯ ತವರು ಮನೆಯವರು ತಮ್ಮಣ್ಣನನ್ನು ಅವಮಾನ ಮಾಡಿ ಕಳಿಸಿದ್ದಾರೆ ಎನ್ನಲಾಗಿದೆ. ಇದರಿಂದ ಬೇಸರಗೊಂಡ ತಮ್ಮಣ್ಣ ರಾತ್ರಿ ತಾನು ವಿಷ ಕುಡಿದು ಮಕ್ಕಳಿಗೂ ಉಣಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.

ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಹುಕ್ಕೇರಿ ಪೊಲೀಸ್ ಠಾಣೆಯ ಸಿಪಿಐ ಗುರುರಾಜ್ ಕಲ್ಯಾಣಶೆಟ್ಟಿ, ಎಸ್ ಐ ಶಿವಾನಂದ್ ಗುಡಗನಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Related Articles

Back to top button