Latest

ಹೋಳಿ ಉತ್ಸವ ಆಚರಿಸುವ ಪದ್ಧತಿ

ತಿಥಿ : ‘ಪ್ರದೇಶಕ್ಕನುಸಾರ ಫಾಲ್ಗುಣ ಹುಣ್ಣಿಮೆಯಿಂದ ಪಂಚಮಿಯವರೆಗಿನ 5-6 ದಿನಗಳಲ್ಲಿ ಕೆಲವು ಕಡೆ ಎರಡು ದಿನ ಮತ್ತು ಇನ್ನು ಕೆಲವು ಕಡೆಗಳಲ್ಲಿ ಐದು ದಿನ ಗಳ ವರೆಗೆ ಈ ಉತ್ಸವವನ್ನು ಆಚರಿಸುತ್ತಾರೆ.

ಇತಿಹಾಸ

ಅ. ಹಿಂದಿನ ಕಾಲದಲ್ಲಿ ಢುಂಢಾ ಅಥವಾ ಢೌಂಢಾ ಹೆಸರಿನ ಒಬ್ಬ ರಾಕ್ಷಸಿಯು ಊರೊಳಗೆ ನುಗ್ಗಿ ಸಣ್ಣ ಮಕ್ಕಳನ್ನು ಪೀಡಿಸುತ್ತಿದ್ದಳು. ಅವಳು ರೋಗಗಳನ್ನು ನಿರ್ಮಿಸುತ್ತಿದ್ದಳು. ಅವಳನ್ನು ಊರಿನಿಂದ ಹೊರಹಾಕಲು ಜನರು ಬಹಳ ಪ್ರಯತ್ನಿಸಿದರು; ಆದರೆ ಅವಳು ಹೋಗಲಿಲ್ಲ. ಆಗ ನಾರದಮುನಿಗಳು ಸಾಮ್ರಾಟ್ ಯುಧಿಷ್ಠಿರನಿಗೆ ಒಂದು ಉಪಾಯವನ್ನು ಹೇಳಿದರು, ಅದೇ ಹೋಲಿಕಾ ಮಹೋತ್ಸವ. (ಸ್ಮೃತಿಕೌಸ್ತುಭ- ಭವಿಷ್ಯೋತ್ತರ ಪುರಾಣ)

ಆ. ಉತ್ತರದಲ್ಲಿ ಹೋಳಿಯ ಮೊದಲ ಮೂರು ದಿನ ಬಾಲಕೃಷ್ಣನನ್ನು ತೊಟ್ಟಿಲಿನಲ್ಲಿ ಮಲಗಿಸುತ್ತಾರೆ ಮತ್ತು ಅವನ ಉತ್ಸವವನ್ನು ಆಚರಿಸುತ್ತಾರೆ. ಫಾಲ್ಗುಣ ಹುಣ್ಣಿಮೆಗೆ ಪೂತನಾ ರಾಕ್ಷಸಿಯ ಪ್ರತಿಕೃತಿಯನ್ನು ಮಾಡಿ ಅದನ್ನು ರಾತ್ರಿ ಸುಡುತ್ತಾರೆ.

ಇ. ಒಮ್ಮೆ ಭಗವಾನ ಶಂಕರರು ತಪಾಚರಣೆಯಲ್ಲಿ ಮಗ್ನರಾಗಿದ್ದರು. ಅವರು ಸಮಾಧಿಯಲ್ಲಿದ್ದರು. ಆಗ ಮನ್ಮಥನು ಅವರ ಅಂತಃಕರಣದಲ್ಲಿ ಪ್ರವೇಶಿಸಿದನು. ‘ನನ್ನನ್ನು ಯಾರು ಚಂಚಲಗೊಳಿಸುತ್ತಿದ್ದಾರೆ’, ಎಂದು ಶಂಕರರು ಕಣ್ಣುಗಳನ್ನು ತೆರೆದರು ಮತ್ತು ಮನ್ಮಥನನ್ನು ನೋಡಿದ ಕೂಡಲೇ ಸುಟ್ಟುಹಾಕಿದರು. ದಕ್ಷಿಣದಲ್ಲಿನ ಜನರು ಕಾಮದೇವನ ದಹನಕ್ಕಾಗಿ ಈ ಉತ್ಸವವನ್ನು ಆಚರಿಸುತ್ತಾರೆ. ಈ ದಿನದಂದು ಮನ್ಮಥನ ಪ್ರತಿಮೆಯನ್ನು ಮಾಡಿ ಅವನ ದಹನ ಮಾಡುತ್ತಾರೆ. ಈ ಮನ್ಮಥನನ್ನು ಗೆಲ್ಲುವ ಕ್ಷಮತೆಯು ಹೋಳಿಯಲ್ಲಿದೆ; ಅದಕ್ಕಾಗಿಯೇ ಹೋಳಿ ಉತ್ಸವವಿದೆ.

ಪದ್ಧತಿ

ಅ. ಸ್ಥಾನ ಮತ್ತು ಸಮಯ: ದೇವಸ್ಥಾನದ ಮುಂದೆ ಅಥವಾ ಅನುಕೂಲತೆ ಇರುವಲ್ಲಿ ಹುಣ್ಣಿಮೆಯ ಸಾಯಂಕಾಲ ಹೋಳಿಯನ್ನು ಹೊತ್ತಿಸುವುದಿರುತ್ತದೆ. ಹೆಚ್ಚಾಗಿ ಗ್ರಾಮದೇವತೆಯ ಎದುರಿಗೆ ಹೋಳಿಯನ್ನು ರಚಿಸಲಾಗುತ್ತದೆ.

ಆ. ಕೃತಿ : ಮಧ್ಯದಲ್ಲಿ ಔಡಲಗಿಡ, ತೆಂಗಿನಗಿಡ, ಅಡಿಕೆ ಗಿಡ ಅಥವಾ ಕಬ್ಬನ್ನು ನಿಲ್ಲಿಸುತ್ತಾರೆ. ಅದರ ಸುತ್ತಲೂ ಬೆರಣಿ ಮತ್ತು ಒಣ ಕಟ್ಟಿಗೆಗಳನ್ನು ರಚಿಸುತ್ತಾರೆ. ಮೊದಲು ಯಜಮಾನನು (ಹೋಳಿ ಮಾಡುವವನು) ಶುಚಿರ್ಭೂತನಾಗಿ, ದೇಶಕಾಲದ ಉಚ್ಚಾರವನ್ನು (ಕಥನ) ಮಾಡಿ ‘ಸಕುಟುಂಬಸ್ಯ ಮಮ ಢುಂಢಾರಾಕ್ಷಸೀ ಪ್ರೀತ್ಯರ್ಥಂ ತತ್ಪೀಡಾಪರಿಹಾರಾರ್ಥಂ ಹೋಲಿಕಾಪೂಜನಮಹಂ ಕರಿಷ್ಯೇ|’ ಎಂದು ಸಂಕಲ್ಪ ಮಾಡಬೇಕು. ನಂತರ ಪೂಜೆಯನ್ನು ಮಾಡಿ ನೈವೇದ್ಯ ತೋರಿಸಬೇಕು.

ನಂತರ ‘ಹೋಲಿಕಾಯೈ ನಮಃ|’ ಎಂದು ಹೇಳಿ ಹೋಳಿಯನ್ನು ಹೊತ್ತಿಸಬೇಕು. ಹೋಳಿಯು ಹೊತ್ತಿದ ನಂತರ ಹೋಳಿಗೆ ಪ್ರದಕ್ಷಿಣೆ ಹಾಕಬೇಕು ಮತ್ತು ಬೋರಲು ಕೈಯಿಂದ ಬೊಬ್ಬೆ ಹೊಡೆಯಬೇಕು. ಹೋಳಿಯು ಸಂಪೂರ್ಣವಾಗಿ ಉರಿದ ನಂತರ ಹಾಲು ಮತ್ತು ತುಪ್ಪವನ್ನು ಚಿಮುಕಿಸಿ ಅದನ್ನು ಶಾಂತಗೊಳಿಸಬೇಕು. ಅನಂತರ ನೆರೆದ ಜನರಿಗೆ ತೆಂಗಿನಕಾಯಿ, ಹೆಬ್ಬಲಸು ಮುಂತಾದ ಹಣ್ಣುಗಳನ್ನು ಹಂಚಬೇಕು. ಆ ರಾತ್ರಿಯನ್ನು ನೃತ್ಯಗಾಯನ ಗಳಲ್ಲಿ ಕಳೆಯಬೇಕು. ಮರುದಿನ ಬೆಳಗ್ಗೆ ಹೋಳಿಯ ಬೂದಿಗೆ ವಂದಿಸಬೇಕು. ಆ ಬೂದಿಯನ್ನು ಮೈಗೆ ಹಚ್ಚಿಕೊಂಡು ಸ್ನಾನ ಮಾಡಬೇಕು, ಅಂದರೆ ಆಧಿ-ವ್ಯಾಧಿಗಳ ತೊಂದರೆಯಾಗುವುದಿಲ್ಲ. (ಆಧಿ ಎಂದರೆ ಮಾನಸಿಕ ವ್ಯಥೆ ಅಥವಾ ಚಿಂತೆ ಮತ್ತು ವ್ಯಾಧಿ ಎಂದರೆ ರೋಗ.) ಬೆಳಗ್ಗೆ ಅಶ್ಲೀಲ ಮಾತುಗಳನ್ನಾಡಿ ಹೋಳಿಯ ರಕ್ಷೆಯನ್ನು ವಿಸರ್ಜಿಸಬೇಕು. ಅನಂತರ ಹೋಳಿಯ ಪ್ರಾರ್ಥನೆ ಮಾಡಬೇಕು.

ಬೊಬ್ಬೆ ಹೊಡೆಯುವುದರ ಅರ್ಥ
ಫಾಲ್ಗುಣ ಹುಣ್ಣಿಮೆಗೆ ಪೂರ್ವಾ ಫಾಲ್ಗುಣ ನಕ್ಷತ್ರ ಬರುತ್ತದೆ. ‘ಭಗ’ ದೇವತೆಯು ಈ ನಕ್ಷತ್ರದ ದೇವತೆಯಾಗಿದ್ದಾಳೆ. ‘ಭಗ’ದ ಪ್ರಚಲಿತ ಅರ್ಥವೆಂದರೆ ಜನನೇಂದ್ರಿಯ ಎಂದರೆ ಸ್ತ್ರೀಯ ಜನನೇಂದ್ರಿಯ. ಆದುದರಿಂದ ಭಗದ ಹೆಸರಿನಿಂದ ಬೊಬ್ಬೆ ಹೊಡೆಯಬೇಕು. ಇದು ಒಂದು ರೀತಿಯ ಪೂಜೆಯೇ ಆಗಿದೆ. ಇದು ಆ ದೇವತೆಯ ಸನ್ಮಾನವೇ ಆಗಿದೆ ಎಂದು ತಿಳಿಯಬೇಕು. ಕೆಲವೆಡೆ ಹೋಳಿಯ ಬೂದಿ, ಸಗಣಿ, ಕೆಸರು ಮುಂತಾದವುಗಳನ್ನು ಮೈಗೆ ಬಳಿದುಕೊಂಡು ನೃತ್ಯ ಮಾಡುವ ಪದ್ಧತಿಯೂ ಇದೆ.

ಧೂಳಿವಂದನ

ತಿಥಿ : ಫಾಲ್ಗುಣ ಕೃಷ್ಣ ಪ್ರತಿಪದೆ

ಪೂಜೆ : ಈ ದಿನ ಹೋಳಿಯ ಬೂದಿ ಅಥವಾ ಧೂಳಿಯ ಪೂಜೆಯನ್ನು ಮಾಡುವುದಿರುತ್ತದೆ. ಪೂಜೆಯಾದ ನಂತರ ಈ ಕೆಳಗಿನ ಮಂತ್ರದಿಂದ ಅವಳಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ.

ವಂದಿತಾಸಿ ಸುರೇಂದ್ರೇಣ ಬ್ರಹ್ಮಣಾ ಶಂಙ್ಕರೇಣ ಚ| ಅತಸ್ತ್ವಂ ಪಾಹಿ ನೋ ದೇವಿ ಭೂತೇ ಭೂತಿಪ್ರದಾ ಭವ||

ಅರ್ಥ : ಹೇ ಲಕ್ಷ್ಮೀ, ನೀನು ಇಂದ್ರ, ಬ್ರಹ್ಮ ಮತ್ತು ಮಹೇಶ್ವರರಿಂದ ವಂದಿತಳಾಗಿ ರುವೆ; ಆದುದರಿಂದ ಹೇ ಐಶ್ವರ್ಯವತಿ ದೇವಿಯೇ, ನೀನು ನಮಗೆ ಐಶ್ವರ್ಯವನ್ನು ಕೊಡುವವಳಾಗು ಮತ್ತು ನಮ್ಮನ್ನು ರಕ್ಷಿಸು.’

ರಂಗಪಂಚಮಿ

ತಿಥಿ : ಫಾಲ್ಗುಣ ಕೃಷ್ಣ ಪಂಚಮಿ (ಇತ್ತೀಚೆಗೆ ಹಲವೆಡೆ ಹೋಳಿಯ ಮರುದಿನ ರಂಗಪಂಚಮಿಯನ್ನು ಆಚರಿಸಲಾಗುತ್ತದೆ.)

ಉತ್ಸವ : ಈ ದಿನದಂದು ಇತರರ ಮೇಲೆ ಗುಲಾಲು, ಬಣ್ಣದ ನೀರು ಮುಂತಾದವುಗಳನ್ನು ಎರಚುತ್ತಾರೆ.

ಹೋಲಿಕೋತ್ಸವದಲ್ಲಿನ ಅಯೋಗ್ಯ ಪದ್ಧತಿಗಳನ್ನು ತಡೆಗಟ್ಟುವುದು
ನಮ್ಮ ಧರ್ಮಕರ್ತವ್ಯವಾಗಿದೆ!

ಸದ್ಯ ಹೋಳಿಯ ನಿಮಿತ್ತದಿಂದ ಅಯೋಗ್ಯ ಪದ್ಧತಿಗಳಾಗುತ್ತಿವೆ. ಉದಾ. ಒತ್ತಾಯದಿಂದ ಹಣ ವಸೂಲಿ ಮಾಡಲಾಗುತ್ತದೆ, ಇತರರ ಗಿಡಮರಗಳನ್ನು ಕಡಿಯಲಾಗುತ್ತದೆ, ವಸ್ತುಗಳ ಕಳ್ಳತನವಾಗುತ್ತದೆ, ಸರಾಯಿ ಕುಡಿದು ಗೊಂದಲ ಮಾಡಲಾಗುತ್ತದೆ. ಹಾಗೆಯೇ ರಂಗಪಂಚಮಿಯ ನಿಮಿತ್ತ ಒಬ್ಬರಿಗೊಬ್ಬರು ಹೊಲಸು ನೀರಿನ ಪುಗ್ಗೆಗಳಿಂದ ಹೊಡೆಯುವುದು, ಅಪಾಯಕಾರಿ ಬಣ್ಣಗಳನ್ನು ಮೈಗೆ ಹಚ್ಚುವುದು ಮುಂತಾದವುಗಳು ಅಯೋಗ್ಯ ಪದ್ಧತಿಗಳಾಗಿವೆ. ಈ ಅಯೋಗ್ಯ ಪದ್ಧತಿಗಳಿಂದಾಗಿ ಧರ್ಮಹಾನಿಯಾಗುತ್ತದೆ. ಅದನ್ನು ನಿಲ್ಲಿಸುವುದು ನಮ್ಮ ಧರ್ಮಕರ್ತವ್ಯವಾಗಿದೆ. ಇದಕ್ಕಾಗಿ ಸಮಾಜಕ್ಕೆ ಪ್ರಬೋಧನೆ ಮಾಡಿರಿ.

(ಆಧಾರ: ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ’)

ಆಧಾರ : Sanatan.org/kannada

ಸಂಗ್ರಹ :
ಶ್ರೀ. ವಿನೋದ್ ಕಾಮತ್

ರಾಜ್ಯ ವಕ್ತಾರರು, ಸನಾತನ ಸಂಸ್ಥೆ
(ಸಂಪರ್ಕ : 9342599299)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button