ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲ್ಲೂಕಿನ ನಾಗರಗಾಳಿ ಅರಣ್ಯದಿಂದ ಆಹಾರ ಅರಸುತ್ತ ಕರ್ಜಗಿ ಗ್ರಾಮದೊಳಗೆ ಬಂದ ಸಾರಂಗವನ್ನು ರಕ್ಷಿಸಿದ ಕರ್ಜಗಿ ಗ್ರಾಮಸ್ಥರು ಅದನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಮರಳಿ ಅರಣ್ಯದೊಳಗೆ ಬಿಟ್ಟ ಘಟನೆ ಗುರುವಾರ ವರದಿಯಾಗಿದೆ.
ಕರ್ಜಗಿ ಗ್ರಾಮಕ್ಕೆ ಬಂದ ಸಾರಂಗವನ್ನು ಗಮನಿಸಿದ ಬೀದಿ ನಾಯಿಗಳು ಅದರ ಮೇಲೆ ಹಲ್ಲೆಗೆ ಮುಂದಾಗಿದ್ದವು. ಜೀವ ಭಯದಿಂದ ಸಾರಂಗ ಗ್ರಾಮದ ಮನೆಯೊಂದಕ್ಕೆ ನುಗ್ಗಿತ್ತು. ಮನೆಯ ಸದಸ್ಯರು ಅದನ್ನು ನಾಯಿಗಳಿಂದ ರಕ್ಷಿಸಿ ಗ್ರಾಮಸ್ಥರಿಗೆ ವಿಷಯ ತಿಳಿಸಿದರು.
ಗ್ರಾಮಸ್ಥರು ಅದೇ ಗ್ರಾಮದ ನಿವಾಸಿ ಹಾಗೂ ಮಾಜಿ ಶಾಸಕ ಅರವಿಂದ ಪಾಟೀಲ ಅವರ ಗಮನಕ್ಕೆ ಈ ವಿಷಯ ತಂದಿದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ಗ್ರಾಮಕ್ಕೆ ಭೇಟಿ ನೀಡಿದ ಅರವಿಂದ ಪಾಟೀಲ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆಯವರ ಸಮಕ್ಷಮ ಸಾರಂಗಕ್ಕೆ ಪಶು ವೈದ್ಯರಿಂದ ಚಿಕಿತ್ಸೆ ಕೊಡಿಸಿ ಮರಳಿ ಅರಣ್ಯಕ್ಕೆ ಬಿಟ್ಟರು ಎಂದು ಉಪ ವಲಯ ಅರಣ್ಯ ಅಧಿಕಾರಿ ಎನ್.ಜಿ ಹಿರೇಮಠ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ