ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಪತ್ರಕರ್ತ ನರೇಶ್ ಗೌಡ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಸಿಡಿ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಇದರಲ್ಲಿ ನನ್ನ ಹೆಸರನ್ನು ತಳುಕು ಹಾಕಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ನಾನು ಪತ್ರಕರ್ತನಾಗಿರುವುದರಿಂದ ಸಿಡಿಯಲ್ಲಿರುವ ಯುವತಿ ನನಗೆ ಪರಿಚಯ. ಆಕೆಗೆ ಆದ ಅನ್ಯಾಯದ ಬಗ್ಗೆ ಹೇಳಿದ್ದಳು. ನ್ಯಾಯಕೊಡಿಸುವಂತೆ ಕೋರಿದ್ದಳು. ಆದರೆ ಆ ಸಂದರ್ಭದಲ್ಲಿ ನನ್ನ ತಾಯಿಗೆ ಹುಷಾರಿರಲಿಲ್ಲ. ಜೊತೆಗೆ ನನ್ನ ಮಗುವಿನ ನಾಮಕರಣವಿತ್ತು. ಹಾಗಾಗಿ ಬ್ಯೂಸಿ ಇದ್ದಿದ್ದರಿಂದ ಸುಮ್ಮನಿದ್ದೆ. ಆದರೆ ಸಿಡಿ ಪ್ರಕರಣ ಹೇಗೆ ಬಯಲಿಗೆ ಬಂತು ಎಂಬುದು ನನಗೆ ಗೊತ್ತಿಲ್ಲ. ಈ ಪ್ರಕರಣದಲ್ಲಿ ಅನಗತ್ಯವಾಗಿ ನನ್ನ ಹೆಸರನ್ನು ತಳಕು ಹಾಕಲಾಗುತ್ತಿದೆ.
ಯುವತಿ ನನ್ನ ಮಗುವಿನ ನಾಮಕರಣಕ್ಕೆ ಬಂದಿದ್ದಳು. ಯುವತಿ ಮಾತ್ರವಲ್ಲ ಹಲವು ರಾಜಕೀಯ ಮುಖಂಡರು ಬಂದಿದ್ದರು. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಹೀಗೆ ಎಲ್ಲಾ ಪಕ್ಷದ ರಾಜಕೀಯ ನಾಯಕರೂ ಬಂದಿದ್ದರು. ಆದರೆ ಸಿಡಿ ಪ್ರಕರಣದಲ್ಲಿ ನನ್ನ ಕೈವಾಡವಿಲ್ಲ. ಇನ್ನು ನಾನು ಯಾವುದೇ ಹಣ ಪಡೆದುಕೊಂಡಿಲ್ಲ. 5 ಕೋಟಿ ಡೀಲ್ ಎಂದು ನನ್ನ ವಿರುದ್ಧ ಅನಗತ್ಯ ಆರೋಪ ಮಾಡಲಾಗುತ್ತಿದೆ. ನಾನು ಪತ್ರಕರ್ತನಾಗಿ ಕೆಲಸ ಮಾಡುವುದರ ಜೊತೆಗೆ ಬೇರೆ ಸಣ್ಣಪುಟ್ಟ ಕೆಲಸವನ್ನೂ ಮಾಡುತ್ತಾ ಊರಿನಲ್ಲಿ ಕಷ್ಟಪಟ್ಟು ಜೀವನ ಸಾಗಿಸುತ್ತಿದ್ದೇನೆ. ನನ್ನ ಪಾತ್ರವೇ ಇಲ್ಲ ಅಂದಮೇಲೆ ದುಡ್ದಿನ ವಿಚಾರ ಎಲ್ಲಿಂದ ಬಂತು? ರಮೇಶ್ ಜಾರಕಿಹೊಳಿ ಮಾಡಬಾರದ ಕೆಲಸ ಮಾಡಿದ್ದಾರೆ. ಅವರು ಶಿಕ್ಷೆ ಅನುಭವಿಸುವುದು ಬಿಟ್ಟು ನಿರಪರಾಧಿಗಳನ್ನು ಶಿಕ್ಷಿಸುತ್ತಿದ್ದಾರೆ.
ಪ್ರಕರಣದಲ್ಲಿ ಸಂಬಂಧವೇ ಇಲ್ಲದ ನಿರ್ದೋಷಿ ನಾನು. ನನ್ನ ಹೆಸರನ್ನು ಎಳೆದು ತರಲಾಗುತ್ತಿದೆ. ಇನ್ನು ಸಿಡಿಯಲ್ಲಿನ ಯುವತಿಗೆ ಅನ್ಯಾಯವಾಗಿದೆ. ಆಕೆಗೆ ನ್ಯಾಯಕೊಡಿಸಬೇಕಾಗಿದ್ದು, ಶೋಷಿತರ ಪರವಾಗಿ ಹೋರಾಡಬೇಕಾಗಿದ್ದು ನಮ್ಮ ಕರ್ತವ್ಯ. ಒಂದು ಹೆಣ್ಣುಮಗಳನ್ನು ಬಳಸಿಕೊಂಡು ಮಾಡಬಾರದ ಕೆಲಸಮಾಡಿರುವ ರಮೇಶ್ ಜಾರಕಿಹೊಳಿ ಈಗ ಆಕೆಯನ್ನೇ ತಪ್ಪಿತಸ್ಥಳು ಎಂಬಂತೆ ಬಿಂಬಿಸುತ್ತಿದ್ದಾರೆ. ಅಲ್ಲದೇ ಪ್ರಕರಣದಲ್ಲಿ ಸಂಬಂಧವೇ ಇಲ್ಲದ ನಮ್ಮ ಹೆಸರನ್ನು ಎಳೆದು ತರಲಾಗುತ್ತಿದೆ.
ನಾನು ಈಗಲೇ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಬಹುದಿತ್ತು. ಆದರೆ ಬಂದರೆ ಏನಾಗುತ್ತೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ನನ್ನನ್ನು ಸಿಲುಕಿಸುವ ಎಲ್ಲಾ ಸಿದ್ಧತೆ ಮಾಡಿಕೊಂಡಿರುವ ಬಗ್ಗೆ ಗೊತ್ತು. ಹಾಗಾಗಿ ನಾನು 5-10 ದಿನಗಳಲ್ಲಿ ತನಿಖಾಧಿಕಾರಿಗಳ ಮುಂದೆ ಬಂದು ಹಾಜರಾಗುತ್ತೇನೆ. ನನ್ನ ಬಳಿ ಇರುವ ಎಲ್ಲಾ ಮಾಹಿತಿಯನ್ನು ನೀಡುತ್ತೇನೆ ಎಂದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ