Karnataka NewsLatestPolitics

*ಕಸದ ಹೆಸರಲ್ಲಿ 39 ಸಾವಿರ ಕೋಟಿ ಟೆಂಡರ್ ಅಕ್ರಮ: ಈ ಗುತ್ತಿಗೆ ರದ್ದುಪಡಿಸಿ ತ್ಯಾಜ್ಯ ವಿಲೇವಾರಿಗೆ ಕ್ರಮ ವಹಿಸಿ: ಸರ್ಕಾರಕ್ಕೆ ವಿಜಯೇಂದ್ರ ಆಗ್ರಹ*

ಪ್ರಗತಿವಾಹಿನಿ ಸುದ್ದಿ: “ಜನರ ಹಣ ಲೂಟಿ ಮಾಡಲು ಚಿನ್ನದ ಗಣಿಗೇ ಕೈ ಹಾಕಬೇಕಾಗಿಲ್ಲ, ಕಸದಿಂದಲೂ ಲೂಟಿ ಮಾಡುವ ಕಲೆ ನಮಗೆ ಸಿದ್ಧಿಸಿದೆ” ಎಂಬುದನ್ನು ಕರ್ನಾಟಕ ಕಾಂಗ್ರೆಸ್ ‌ ಸರ್ಕಾರ ಸಾಬೀತು ಪಡಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

39 ಸಾವಿರ ಕೋಟಿ ತ್ಯಾಜ್ಯ ಹಗರಣವನ್ನು ನಮ್ಮ ವಿರೋಧ ಪಕ್ಷ ನಾಯಕರಾದ ಮಾನ್ಯಆರ್. ಅಶೋಕ್ ಅವರು ಬಯಲಿಗೆಳೆದಿದ್ದಾರೆ. ಈ ಸಂಬಂಧ ನಮ್ಮ ಪಕ್ಷ ರಾಜ್ಯಪಾಲರಿಗೆ ದೂರನ್ನು ನೀಡಿದೆ. ಗುತ್ತಿಗೆದಾರರನ್ನು ಬದಿಗೆ ಸರಿಸಿ, ಕಪ್ಪು ಪಟ್ಟಿಯಲ್ಲಿರುವ ದೆಹಲಿ ಮೂಲದ ರಾಮ್ ಕಿ ಕಂಪನಿಗೆ ಕೆಲ ಸಚಿವರುಗಳ ವಿರೋಧದ ನಡುವೆಯೂ 35 ವರ್ಷಗಳ ಸುದೀರ್ಘ ಕಾಲ ಗುತ್ತಿಗೆ ನೀಡಿ, 10 ಸಾವಿರ ಕೋಟಿ ರೂ ಕಿಕ್ ಬ್ಯಾಕ್ ಪಡೆದಿರುವ ಈ ಹಗರಣ ಕಾಂಗ್ರೆಸ್‌ ಸರ್ಕಾರದ ಲೂಟಿ ಹಗರಣದಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ ಎಂದು ಆರೋಪಿಸಿದ್ದಾರೆ.

ಬೆಂಗಳೂರು ಅಭಿವೃದ್ಧಿ ಮಾಡುವ, ಬೆಂಗಳೂರನ್ನು ಸ್ವಚ್ಛಗೊಳಿಸುವ ಹೆಸರಿನಲ್ಲಿ ಜನರ ತೆರಿಗೆ ಹಣವನ್ನು ಸ್ವಚ್ಛಗೊಳಿಸಲು ಹೊರಟಿರುವುದು ಲಜ್ಜೆಗೇಡಿತನದ ಭ್ರಷ್ಟಾಚಾರದ ಪರಮಾವಧಿಯಾಗಿದೆ. ಹಗರಣಗಳಿಂದ ಗಬ್ಬೆದ್ದು ನಾರುತ್ತಿರುವ ಈ ಕಾಂಗ್ರೆಸ್‌ ಸರ್ಕಾರ ತ್ಯಾಜ್ಯ ವಿಲೇವಾರಿಯ ಗುತ್ತಿಗೆಯಲ್ಲೂ ಸಾವಿರಾರು ಕೋಟಿ ಲೂಟಿ ಹೊಡೆಯುವ ಮೂಲಕ ಭ್ರಷ್ಟಾಚಾರದ ದುರ್ಗಂಧವನ್ನು ಸುಂದರ ಬೆಂಗಳೂರಿಗೆ ಪಸರಿಸಲು ಹೊರಟಿದೆ.

ಕೂಡಲೇ ಈ ಗುತ್ತಿಗೆಯನ್ನು ರದ್ದುಪಡಿಸಿ, ಪಾರದರ್ಶಕತೆಯನ್ನು ಕಾಯ್ದುಕೊಂಡು ತ್ಯಾಜ್ಯ ವಿಲೇವಾರಿಯ ಗುತ್ತಿಗೆ ವಹಿಸುವ ಕ್ರಮಕ್ಕೆ ಮುಂದಾಗಲಿ. ಇಲ್ಲದಿದ್ದರೆ ಈ ಕಾಂಗ್ರೆಸ್‌ ಸರ್ಕಾರವನ್ನೇ ತ್ಯಾಜ್ಯ ಎಂದು ರಾಜ್ಯದ ಜನತೆ ಪರಿಗಣಿಸಿ ವಿಲೇವಾರಿ ಮಾಡುತ್ತಾರೆ, ಇದಕ್ಕೆ ಬೆಂಗಳೂರಿಗರು ಮುನ್ನುಡಿ ಬರೆಯಲಿದ್ದಾರೆ. ಈ ಗುತ್ತಿಗೆ ರದ್ದು ಮಾಡಲು ಆಗ್ರಹಿಸಿ ಬಿಜೆಪಿ ಹೋರಾಟ ಮುಂದುವರೆಸಲಿದೆ ಎಂದು ತಿಳಿಸಿದ್ದಾರೆ.

Home add -Advt

ವಿಜಯೇಂದ್ರ ಟ್ವೀಟ್ ಗೆ ಹಲವರು ಕಮೆಂಟ್ ಹಾಕಿದ್ದಾರೆ.

ಈ ಹಗರಣವನ್ನಾದರೂ ತಾರ್ಕಿಕ ಅಂತ್ಯ ಕಾಣಿಸುವವರೆಗೂ ಹೋರಾಡಿ ! ಈಗಾಗಲೇ ಬಿಜೆಪಿ ಕಾರ್ಯಕರ್ತರು ಮತ್ತು ನಾಗರಿಕರು ನಿಮ್ಮನ್ನು ಕ್ಯಾಕರಿಸಿ ಉಗಿಯುತ್ತಿದ್ದಾರೆ. ಹೊಂದಾಣಿಕೆ ರಾಜಕೀಯ ಬಿಡಿ ! ಅಧಿಕಾರ ಸುಮ್ಮನೆ ಬರುವುದಿಲ್ಲ. ಇಲ್ಲವಾದರೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ! ಎಂದು ಒಬ್ಬರು ಪ್ರತಿಕ್ರಿಯಿದ್ದಾರೆ.

Related Articles

Back to top button